Home ಟಾಪ್ ಸುದ್ದಿಗಳು ಪಟಾಕಿ ತಯಾರಿಕಾ ಘಟಕದಲ್ಲಿ ಭಾರಿ ಸ್ಫೋಟ; ನಾಲ್ವರು ಬಲಿ

ಪಟಾಕಿ ತಯಾರಿಕಾ ಘಟಕದಲ್ಲಿ ಭಾರಿ ಸ್ಫೋಟ; ನಾಲ್ವರು ಬಲಿ

ಶಿವಕಾಶಿ: ದೇಶದಲ್ಲಿಯೇ ಪಟಾಕಿ ತಯಾರಿಕೆಗೆ ಹೆಸರುವಾಸಿಯಾಗಿರುವ ತಮಿಳುನಾಡಿನ ಶಿವಕಾಶಿಯಲ್ಲಿ ಮತ್ತೊಂದು ದುರಂತ ನಡೆದಿದೆ. ಶಿವಕಾಶಿಯ ಪುಡುಪಟ್ಟಿಯಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿ ನಾಲ್ವರು ಮೃತಪಟ್ಟು, 25 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

 ಪಟಾಕಿ ತಯಾರಿಸಲು ಕಾರ್ಮಿಕರು ಕೆಮಿಕಲ್’ಗಳನ್ನು ಮಿಶ್ರಣ ಮಾಡುವ ವೇಳೆ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಸ್ಪೋಟದ ರಭಸಕ್ಕೆ 5 ಶೆಡ್ ಗಳು ಹಾಗೂ ಪಟಾಕಿಗಳನ್ನು ಸಂಗ್ರಹಿಸಿಟ್ಟಿದ್ದ ಸ್ಟೋರ್’ ರೂಮ್ ಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.

ಬೆಂಕಿ ಅವಘಡ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ 2  ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಾತಮ್ ಪಟ್ಟಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಿವಕಾಶಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತ ದೇಹಗಳನ್ನು ಹಸ್ತಾಂತರಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಪೈಕಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 

2013ರಲ್ಲಿ ಶಿವಕಾಶಿಯಲ್ಲಿ ನಡೆದ ಘೋರ ಅಗ್ನಿ ದುರಂತದಲ್ಲಿ 45 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರೆ, 70 ಮಂದಿ ಗಾಯಗೊಂಡಿದ್ದರು. 2021ರಲ್ಲಿ 12ಕ್ಕೂ ಹೆಚ್ಚು ಅಗ್ನಿ ಅವಘಡ ಸಂಭವಿಸಿ 50 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

Join Whatsapp
Exit mobile version