ಬೆಂಗಳೂರು: ಸೂಕ್ತ ದಾಖಲಾತಿ ಇಲ್ಲದೆ ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಮೇಲೆ ವಿಶೇಷ ಕಾರ್ಯಾಚರಣೆ ಮುಂದುವರೆಸಿರುವ ಬೆಂಗಳೂರು ನಗರ ಪೊಲೀಸರು 38 ಮಂದಿ ವಿದೇಶಿ ಪ್ರಜೆಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಶೈಕ್ಷಣಿಕ, ವ್ಯವಹಾರದ ಸಲುವಾಗಿ ವೀಸಾ ಪಡೆದುಕೊಂಡು ನಗರಕ್ಕೆ ಬರುವ ವಿದೇಶಿಗರು ಗಡುವು ಮೀರಿದರೂ ತಮ್ಮ ದೇಶಗಳಿಗೆ ತೆರಳದೆ ನಗರದಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಜೊತೆಗೆ ಡ್ರಗ್ಸ್, ವೇಶ್ಯಾವಾಟಿಕೆ ದಂಧೆ ಸೇರಿ ವಿವಿಧ ಅಪರಾಧ ಕೃತ್ಯಗಳಲ್ಲಿ ತೊಡಗಿರುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಹಲವು ಬಾರಿ ಬಂಧಿಸಿದರೂ ಹೊರಬಂದು ಮತ್ತೆ ತಮ್ಮ ಕ್ರೈಂ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇವರಿಗೆ ಕಡಿವಾಣ ಹಾಕಲು ವಿಶೇಷ ಅಭಿಯಾನ ಕೈಗೊಂಡಿದ್ದ ಪೊಲೀಸರು ಎರಡು ದಿನಗಳಲ್ಲಿ 38 ಮಂದಿ ವಿದೇಶಿಯರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಕೈಗೊಂಡಿದ್ದಾರೆ.
ವಶಕ್ಕೆ ಪಡೆದುಕೊಂಡ 38 ಮಂದಿ ಆರೋಪಿಗಳ ಬಹುತೇಕರು ನಿಖರವಾದ ಹೆಸರು, ಮನೆ ವಿಳಾಸ ತಿಳಿದುಬಂದಿಲ್ಲ. ಹೆಚ್ಚಿನವರು ದಕ್ಷಿಣ ಆಫ್ರಿಕ, ನೈಜೀರಿಯಾ ಮೂಲದವರಾಗಿದ್ದಾರೆ.