ನವದೆಹಲಿ: ಒಳಚರಂಡಿ ಸ್ವಚ್ಛಗೊಳಿಸುವಾಗ ಸಂಭವಿಸುತ್ತಿರುವ ಕಾರ್ಮಿಕರ ಸಾವಿನ ಪ್ರಕರಣಗಳನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಒಳಚರಂಡಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಕಾರ್ಮಿಕರು ಮೃತಪಟ್ಟರೆ ಸರ್ಕಾರ ಬೃಹತ್ ಮೊತ್ತ ಪರಿಹಾರ ನೀಡಲು ಆದೇಶಿಸಿದೆ. ಅಂಥ ಸಂದರ್ಭದಲ್ಲಿ 30 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆದೇಶಿಸಿದೆ. ಅಲ್ಲದೆ, ಒಳಚರಂಡಿ ಸ್ವಚ್ಛಗೊಳಿಸುವಾಗ ಕಾರ್ಮಿಕರು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದಲ್ಲಿ 20 ಲಕ್ಷ ರೂ., ಇತರ ಅಂಗವೈಕಲ್ಯತೆಗೆ 10 ಲಕ್ಷ ರೂ. ಪರಿಹಾರ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್, ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ಪೀಠ ಸೂಚನೆ ನೀಡಿದೆ.
ಒಳಚರಂಡಿ ಸ್ವಚ್ಛಗೊಳಿಸುವಾಗ ಸಂಭವಿಸುತ್ತಿರುವ ಸಾವಿನ ಪ್ರಕರಣ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಲಹೊರುವ ಪದ್ಧತಿಯ ಸಂಪೂರ್ಣ ನಿರ್ಮೂಲನೆಯನ್ನು ಖಾತರಿಪಡಿಸಬೇಕು ಎಂದು ತಿಳಿಸಿದೆ. ಶೌಚ ಗುಂಡಿ, ಒಳಚರಂಡಿಗೆ ಇಳಿದು ಕಾರ್ಮಿಕರು ಜೀವ ಕಳೆದುಕೊಳ್ಳುವ ಸಂದರ್ಭಗಳು ಎದುರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯ ಪೀಠದಿಂದ ಈ ಆದೇಶ ನೀಡಲಾಗಿದೆ.
2022ರ ಜುಲೈನಲ್ಲಿ ಕೇಂದ್ರ ಸರ್ಕಾರ ಲೋಕಸಭೆಗೆ ನೀಡಿದ ಮಾಹಿತಿಯಂತೆ ಕಳೆದ ಐದು ವರ್ಷಗಳಲ್ಲಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆ ವೇಳೆ 347 ಕಾರ್ಮಿಕರು ಸಾವನ್ನಪ್ಪಿದ್ದಾರೆ. 40% ಸಾವುಗಳು ಉತ್ತರ ಪ್ರದೇಶ, ದೆಹಲಿ, ತಮಿಳುನಾಡಿನಲ್ಲಿ ಸಂಭವಿಸಿವೆ.