Home ಟಾಪ್ ಸುದ್ದಿಗಳು ತ್ರಿಪುರಾ : ದನಗಳ್ಳತನದ ಆರೋಪದಲ್ಲಿ ಮೂವರು ಮುಸ್ಲಿಂ ಯುವಕರ ಥಳಿಸಿ ಕೊಂದ ಸ್ವಯಂ ಘೋಷಿತ ಗೋರಕ್ಷಕ...

ತ್ರಿಪುರಾ : ದನಗಳ್ಳತನದ ಆರೋಪದಲ್ಲಿ ಮೂವರು ಮುಸ್ಲಿಂ ಯುವಕರ ಥಳಿಸಿ ಕೊಂದ ಸ್ವಯಂ ಘೋಷಿತ ಗೋರಕ್ಷಕ ಗೂಂಡಾಗಳು

ನವದೆಹಲಿ : ದನ ಕಳ್ಳತನದ ಆರೋಪದಲ್ಲಿ ತ್ರಿಪುರಾದಲ್ಲಿ ಮೂವರು ಮುಸ್ಲಿಂ ಯುವಕರನ್ನು ಗುಂಪೊಂದು ಥಳಿಸಿ ಹತ್ಯೆ ಮಾಡಿದ ಪ್ರಕರಣ ವರದಿಯಾಗಿದೆ. ತ್ರಿಪುರಾದ ಖೊವೈ ಜಿಲ್ಲೆಯಲ್ಲಿ ಜೂ.20ರಂದು ಹಿಂದೂಗಳ ಗುಂಪೊಂದು ಮುಸ್ಲಿಂ ಯುವಕರನ್ನು ದನಗಳ್ಳರು ಎಂದು ಆಪಾದಿಸಿ ಮಾರಣಾಂತಿಕ ಹಲ್ಲೆ ಮಾಡಿ ಹತ್ಯೆ ಮಾಡಿದೆ ಎಂದು ವರದಿಗಳು ತಿಳಿಸಿವೆ.

ಮೃತ ಯುವಕರನ್ನು ಬಿಲ್ಲೈ ಮಿಯಾ(21), ಝಯೀದ್‌ ಹುಸೇನ್‌ (28), ಸೈಫುಲ್‌ ಇಸ್ಲಾಮ್‌ (21) ಎಂಬ ಮೂವರನ್ನು ಹತ್ಯೆ ಮಾಡಲಾಗಿದೆ. ಆರಂಭದಲ್ಲಿ ಪೊಲೀಸರು ಹತ್ಯೆಯ ಪ್ರಕರಣ ದಾಖಲಿಸಿಕೊಂಡಿಲ್ಲ. ಆದರೆ, ಬಳಿಕ ವಿಷಯ ಹರಡುತ್ತಿದ್ದಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚೆನ್ನೈಯಲ್ಲಿ ಕಟ್ಟಡ ಕಾರ್ಮಿಕನಾಗಿರುವ ಸೈಫುಲ್‌ ರಜೆಯಲ್ಲಿ ಬಂದಿದ್ದು, ಕೆಲಸಕ್ಕೆ ಹಿಂದಿರುಗಲು ಸಿದ್ಧತೆ ನಡೆಸುತ್ತಿದ್ದರು. ಇದೀಗ ಐದು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಸೈಫುಲ್‌, ತನ್ನ ಪತ್ನಿ ಮತ್ತು ಕುಟುಂಬವನ್ನು ಬಿಟ್ಟು ಅಗಲಿದ್ದಾರೆ. ಈ ಘಟನೆಯಿಂದ ಆಘಾತಗೊಂಡಿರುವ ಅವರ ಕುಟುಂಬ ಈಗ ದುಃಖದಲ್ಲಿ ಮುಳುಗಿದೆ.

ಸೈಫುಲ್‌ ತನ್ನ ಸ್ನೇಹಿತನ ಸಂಬಂಧಿಯೊಬ್ಬರ ಮದುವೆಗಾಗಿ ಅಗರ್ತಲಾಕ್ಕೆ ಹೋಗಿದ್ದರು. ಇದೇ ವೇಳೆ ಚೆನ್ನೈಗೆ ಮರಳಲು ವಿಮಾನ ಟಿಕೆಟ್‌ ಬುಕ್‌ ಮಾಡಲು ಅವರು ಆಧಾರ್‌ ಕಾರ್ಡ್‌ ಕೂಡ ತೆಗೆದುಕೊಂಡು ಹೋಗಿದ್ದರು. ಒಂದು ತಿಂಗಳ ಹಿಂದೆ ಅವರು ತವರಿಗೆ ಬಂದಿದ್ದವರು, ಇದೀಗ ಕೆಲಸಕ್ಕೆ ಹಿಂದಿರುಗಲು ಸಿದ್ಧತೆ ನಡೆಸುತ್ತಿದ್ದರು.

ಮೃತ ಯುವಕರು ಸಾವಿಗೀಡಾದ ಕಾರಣ ಏನೆಂಬುದನ್ನು ಪೊಲೀಸರು ಮೊದಲು ಅವರ ಕುಟುಂಬಕ್ಕೆ ತಿಳಿಸಿರಲಿಲ್ಲ. ಝಯೀದ್‌ ಹುಸೇನ್‌ ಅವರ ಮನೆಯವರು ಹೇಳುವ ಪ್ರಕಾರ, ಅವರ ಮನೆಯಿಂದ 100 ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದೆ. ಕಾರು ಅಪಘಾತದಲ್ಲಿ ಅವರು ಸತ್ತಿದ್ದಾರೆ ಎಂದು ಮೊದಲು ತಿಳಿಸಲಾಗಿತ್ತು.

ಆದರೆ, ಬಳಿಕ ಅವರನ್ನು ಕಳ್ಳರೆಂದು ಹೇಳಿ ಥಳಿಸಿ ಹತ್ಯೆ ಮಾಡಲಾಗಿದೆ ಎಂಬುದು ಗೊತ್ತಾಗಿದೆ. ಝಯೀದ್‌ 21 ವರ್ಷದ ಪತ್ನಿ ಮತ್ತು ಐದು ವರ್ಷದ ಮಗನನ್ನು ಬಿಟ್ಟು ಅಗಲಿದ್ದಾರೆ. ಆತ ಮಿನಿ ಟ್ರಕ್‌ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದ. ಈ ಟ್ರಕ್‌ ನಲ್ಲಿ ಆತ ಸರಕು ಸಾಗಾಟ ಮಾಡುತ್ತಿದ್ದನು ಎಂದು ಅವರ ಮನೆಯವರು ಹೇಳುತ್ತಾರೆ.

ಪೊಲೀಸರು ಆರಂಭದಲ್ಲಿ ಮೊದಲು ಪ್ರಕರಣ ದಾಖಲಿಸಿರಲಿಲ್ಲ. ಒತ್ತಡ ಹೆಚ್ಚಿದಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಆದರೆ, ಇದೇ ವೇಳೆ ಪೊಲೀಸರು ಸತ್ತ ಮೂವರ ವಿರುದ್ಧ ದನಗಳ್ಳತನದ ದೂರೂ ದಾಖಲಿಸಿಕೊಂಡಿದ್ದಾರೆ.

ಇದೀಗ ಪ್ರತಿಪಕ್ಷಗಳು, ಮಾನವ ಹಕ್ಕು ಹೋರಾಟಗಾರರು ಘಟನೆಗೆ ಸಂಬಂಧಿಸಿ ನ್ಯಾಯಕ್ಕಾಗಿ ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಿದ್ದಾರೆ. ವಿವಿಧ ಮಾನವ ಪರ ಹೋರಾಟಗಾರರು ಈ ಘಟನೆಯನ್ನು ಖಂಡಿಸಿದ್ದಾರೆ. ನ್ಯಾಯಕ್ಕಾಗಿ ಮೃತರ ಕುಟುಂಬಗಳೂ ಆಗ್ರಹಿಸುತ್ತಿವೆ.

Join Whatsapp
Exit mobile version