Home ಟಾಪ್ ಸುದ್ದಿಗಳು 2ಬಿ ಮೀಸಲಾತಿ ರದ್ದು: ಸ್ವಾಮೀಜಿಗಳ ಮಧ್ಯ ಪ್ರವೇಶಕ್ಕೆ ಎಸ್‍’ಡಿಪಿಐ ಒತ್ತಾಯ

2ಬಿ ಮೀಸಲಾತಿ ರದ್ದು: ಸ್ವಾಮೀಜಿಗಳ ಮಧ್ಯ ಪ್ರವೇಶಕ್ಕೆ ಎಸ್‍’ಡಿಪಿಐ ಒತ್ತಾಯ

ಮೈಸೂರು: ರಾಜ್ಯದ ಬಡ ಮುಸ್ಲಿಂ ಸಮುದಾಯದ ಶೇ.4% ಮೀಸಲಾತಿಯನ್ನು ರದ್ದು ಮಾಡಿ, ಅದನ್ನು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚಿರುವುದನ್ನು ಸುತ್ತೂರು ಶ್ರೀಗಳು ಹಾಗೂ ಆದಿ ಚುಂಚನಗಿರಿ ಶ್ರೀಗಳು ತಿರಸ್ಕರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿಳಿವಳಿಕೆ ನೀಡಬೇಕು ಎಂದು ಎಸ್‍’ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮನವಿ ಮಾಡಿದ್ದಾರೆ.

ಮುಸ್ಲಿಂ ಸಮುದಾಯವನ್ನು ಶಿಕ್ಷಣ ಮತ್ತು ಉದ್ಯೋಗದಿಂದ ದೂರವಿಡಲು ಬಿಜೆಪಿ ಸರ್ಕಾರ ಶೇ. 4% (2ಬಿ) ಮೀಸಲಾತಿಯನ್ನು ರದ್ದು ಪಡಿಸಿರುವುದನ್ನು ಖಂಡಿಸಿ ಮೈಸೂರಿನ ಸಂತ ಫಿಲೋಮಿನಾ ಚರ್ಚ್ ವೃತ್ತದಲ್ಲಿ ಎಸ್‍’ಡಿಪಿಐ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.


ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಮುಸ್ಲಿಂ ಸಮುದಾಯಕ್ಕೆ ನಿರಂತರವಾಗಿ ವಿವಿಧ ರೂಪದಲ್ಲಿ ಹಿಂಸೆ ನೀಡುತ್ತಾ ಬಂದಿದೆ. ಹಿಜಾಬ್, ಹಲಾಲ್, ಎನ್‍’ಆರ್‍ಸಿ, ಬುರ್ಖಾ, ಬೀಫ್ ಬ್ಯಾನ್, ತ್ರಿವಳಿ ತಲಾಖ್, ಕೊರೋನಾ ಮುಂತಾದ ಅಸಂಬದ್ಧ ವಿಚಾರಗಳನ್ನು ಮುಂದಿಟ್ಟು ಮುಸ್ಲಿಂ ಸಮುದಾಯವನ್ನು ಹಿಂಸಿಸುತ್ತಾ, ಇತರೆ ಸಮುದಾಯಗಳೊಂದಿಗೆ ದೂರವಾಗಿರುವಂತೆ ಮಾಡಿದೆ. ಕೇವಲ ರಾಜಕೀಯಕ್ಕಾಗಿ ಅಮಾಯಕರಾದ ಮುಸಲ್ಮಾನರನ್ನು ಅಪರಾಧಿ ಸ್ಥಾನದಲ್ಲಿಡುವುದು ಯಾವ ನ್ಯಾಯ? ಈ ಕೂಡಲೇ ಸುತ್ತೂರು ಶ್ರೀ ಶಿರಾತ್ರೀಶ್ವರ ಸ್ವಾಮೀಜಿಗಳು ಮತ್ತು ನಿರ್ಮಲಾನಂದನಾಥ ಸ್ವಾಮೀಜಿಗಳ ಮಧ್ಯ ಪ್ರವೇಶಿಸಿ ರಾಜ್ಯ ಸರ್ಕಾರದ ಕಿವಿ ಹಿಂಡಬೇಕು ಹಾಗೂ ನಮ್ಮಿಂದ ಕಿತ್ತು ಹಂಚಿರುವ ಮೀಸಲಾತಿಯನ್ನು ನಯವಾಗಿ ತಿರಸ್ಕರಿಸಬೇಕು ಎಂದು ಕೋರಿದರು.


ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಎಸ್‍’ಐ ನೇಮಕಾತಿಗೆ 80 ಲಕ್ಷ ರೂ. ಲಂಚ, ಪ್ರಾಧ್ಯಾಪಕರ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ, ಗುತ್ತಿಗೆದಾರರಿಂದ ಶೇ.40% ರಷ್ಟು ಲಂಚ, ಹೀಗೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಜನರ ಬಳಿ ಮತ ಯಾಚನೆ ಮಾಡಲು ಯಾವುದೇ ವಿಷಯವಿಲ್ಲ. ಆದ್ದರಿಂದ ಅದು ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಮಾಡಿ ಬಲಿಷ್ಠ ಕೋಮುಗಳಾದ ಒಕ್ಕಲಿಗರು ಮತ್ತು ಲಿಂಗಾಯತರನ್ನು ಮೆಚ್ಚಿಸಲು ಹೊರಟಿದೆ. ಇದೇ ಒಕ್ಕಲಿಗ ಸಮುದಾಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿಯದು ರಾಕ್ಷಸಿ ಪ್ರವೃತ್ತಿ ಎಂದು ಜಾಡಿಸಿದ್ದಾರೆ. ನಾನು ಅವರನ್ನು ಅಭಿನಂದಿಸುತ್ತೇನೆ ಎಂದರು.

ಮುಸಲ್ಮಾನರನ್ನು ಉದ್ಯೋಗ ಮತ್ತು ಶಿಕ್ಷಣದಿಂದ ದೂರವಿಡಲು ಕಳೆದ 30 ವರ್ಷಗಳಿಂದ ರಾಜ್ಯದಲ್ಲಿ ಜಾರಿಯಲ್ಲಿದ್ದ 2ಬಿ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಏಕಾಏಕಿ ಕಿತ್ತುಕೊಂಡಿದೆ.
ಬಡ ಮುಸಲ್ಮಾನರ ತಟ್ಟೆಯಲ್ಲಿದ್ದ ಅನ್ನವನ್ನು ಕಿತ್ತು ಉಳ್ಳವರಿಗೆ ನೀಡಿದ್ದೀರಿ ಇದು ಯಾವ ನ್ಯಾಯ? ಇತಿಹಾಸ ಬಸವರಾಜ ಬೊಮ್ಮಾಯಿ ಅವರನ್ನು ಕ್ಷಮಿಸುವುದಿಲ್ಲ. ನೀವು ನಿಜವಾದ ಬಸವಣ್ಣನ ಅನುಯಾಯಿಗಳಾಗಿದ್ದರೇ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಗುಡುಗಿದರು.


ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ 1 ಕೋಟಿಗೂ ಮಿಗಿಲಾಗಿದೆ. ಮುಸ್ಲಿಂ ಸಮುದಾಯದ ಸ್ಥಿತಿಗತಿ ಇಂದು ದಲಿತರಿಗಿಂತಲೂ ಶೋಚನೀಯವಾಗಿದೆ ಎಂದು ಇದುವರೆಗೂ ವಿವಿಧ ಆಯೋಗದ ಸಮಿತಿಗಳು ವರದಿ ನೀಡಿವೆ. 1953ರಲ್ಲಿ ನೇಮಕವಾದ ಕಾಕಾ ಕಾಳೇಕರ್ ಆಯೋಗದಿಂದ ಹಿಡಿದು ನಾಗಣ್ಣಗೌಡ ಆಯೋಗ, ಚಿನ್ನಪ್ಪ ರೆಡ್ಡಿ ಆಯೋಗ, ಹಾವನೂರು ಆಯೋಗ, ಮಂಡಲ್ ಆಯೋಗ, ಭಕ್ಷಿ ಆಯೋಗ, ಸಾಚಾರ್ ಆಯೋಗ, ರಂಗನಾಥ ಮಿಶ್ರ ಆಯೋಗಗಳು ದೇಶದಲ್ಲಿನ ಮುಸ್ಲಿಂ ಸಮುದಾಯದ ಸ್ಥಿತಿ ಶೋಚನೀಯವಾಗಿದೆ ಎಂದು ವರದಿಗಳನ್ನು ನೀಡಿವೆ. ಅದರಲ್ಲೂ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ನೇಮಕವಾಗಿದ್ದ ರಂಗನಾಥ ಮಿಶ್ರ ಆಯೋಗದ ವರದಿ ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ.10% ರಷ್ಟು ಮೀಸಲಾತಿ ನೀಡಬೇಕು ಎಂದು ಶಿಫಾರಸ್ಸು ಮಾಡಿದೆ. ದುರದೃಷ್ಟವಶಾತ್ ಬೊಮ್ಮಾಯಿ ಸರ್ಕಾರ ನಮಗಿದ್ದ ಶೇ.4% ರಷ್ಟು ಮೀಸಲಾತಿಯನ್ನೂ ಸಹ ಕಸಿದುಕೊಂಡಿದೆ ಇದು ಘೋರ ಅನ್ಯಾಯ ಎಂದು ಕಿಡಿ ಕಾರಿದರು.
ಪ್ರತಿಭಟನೆಗಷ್ಟೇ ನಮ್ಮ ಹೋರಾಟ ನಿಲ್ಲುವುದಿಲ್ಲ. ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತೇವೆ. ಮುಸ್ಲಿಂ ಸಮುದಾಯದ ಬಂಧುಗಳು ಒಂದು ಹೊತ್ತಿನ ಊಟ ಬಿಟ್ಟರೂ ಪರವಾಗಿಲ್ಲ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದು ಸಲಹೆ ನೀಡಿದರು.

ಎಸ್‍’ಡಿಪಿಐ ಮೈಸೂರು ಜಿಲ್ಲಾಧ್ಯಕ್ಷ ರಫತ್ ಖಾನ್ ಮಾತನಾಡಿ, ದೇಶವನ್ನು ಒಂದು ಸಾವಿರ ವರ್ಷ ಆಳಿದ ಮುಸ್ಲಿಂ ದೊರೆಗಳು ದೇಶವನ್ನು ಸಂಪದ್ಭರಿತ ರಾಷ್ಟ್ರವನ್ನಾಗಿ ಮಾಡಿದರು, ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂ ಸಮುದಾಯದ ಕೊಡುಗೆಯೂ ಅಪಾರವಾಗಿದೆ. ಆದರೇ, ಈ ಬಿಜೆಪಿಗರು ನಿರಂತರವಾಗಿ ಮುಸ್ಲಿಂ ಸಮುದಾಯದ ಮೇಲೆ ವಿವಿಧ ರೀತಿಯ ಕಷ್ಟಗಳನ್ನು ಕೊಡುತ್ತಿದ್ದರೂ ಮುಸ್ಲಿಂ ಶಾಸಕರು ಸಮುದಾಯದ ಪರ ನಿಲ್ಲಲಿಲ್ಲ. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸಬೇಕು. ಮುಸಲ್ಮಾನರ ಮತಗಳನ್ನು ಪಡೆದು ಗೆದ್ದು ಸರ್ಕಾರ ರಚಿಸಿರುವ ಕಾಂಗ್ರೆಸ್ ಪಕ್ಷದ ನಾಯಕರು 2ಬಿ ರದ್ದತಿ ಬಗ್ಗೆ ಮಾತನಾಡುತ್ತಿಲ್ಲ, ವಿಶೇಷವಾಗಿ ಮುಸ್ಲಿಂ ಸಮುದಾಯದ ಶಾಸಕರೂ ಸಹಾ ಈ ಬಗ್ಗೆ ಮಾತನಾಡುತ್ತಿಲ್ಲ. ಇವರನ್ನು ಮುಂಬರುವ ಚುನಾವಣೆಯಲ್ಲಿ ಸೋಲಿಸಬೇಕು ಎಂದು ಹೇಳಿದರು.
ಸುಮಾರು ಒಂದು ಗಂಟೆ ಕಾಲ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಹಿಳೆಯರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾ ಗವಹಿಸಿದ್ದರು. ಪ್ರತಿಭಟನೆಯುದ್ದಕ್ಕೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.

ಎಸ್‍ಡಿಪಿಐ ಉಪಾಧ್ಯಕ್ಷ ಪುಟ್ಟನಂಜಯ್ಯ, ಮುಖಂಡರಾದ ಅಮ್ಜದ್ ಖಾನ್, ಮೌಲಾನಾ ನೂರುದ್ದೀನ್, ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಸ್ವಾಮಿ, ಕೌನೇನ್ ರಝಾ, ಶಫಿ, ಮಹಿಳಾ ಘಟಕದ ಅಧ್ಯಕ್ಷೆ ಆಯೇಷಾ, ಮನ್ಸೂರ್ ಮುಂತಾದವರು ಇದ್ದರು.

Join Whatsapp
Exit mobile version