ನವದೆಹಲಿ: ಭಾರತೀಯ ಸೇನೆಗೆ ಸೇರುವ ಉತ್ಸಾಹದಿಂದ ದೆಹಲಿಯಲ್ಲಿ ಯುವಕನೊಬ್ಬ ಪ್ರತಿ ದಿನ 10 ಕಿಲೋಮೀಟರ್ ಓಡುತ್ತಲೇ ಮನೆಗೆ ತೆರಳುತ್ತಿದ್ದ ವೀಡಿಯೋವೊಂದು ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದೀಗ ಸೇನಾ ನೇಮಕಾತಿಯಲ್ಲಿನ ವಿಳಂಬವನ್ನು ಪ್ರತಿಭಟಿಸಿ ರಾಜಸ್ಥಾನದ ಸಿಕರ್ನ್‌ನಿಂದ, 350 ಕಿಲೋಮೀಟರ್ ಓಡುತ್ತಲೇ ಯುವಕನೊಬ್ಬ ನವದೆಹಲಿಗೆ ತಲುಪಿದ್ದಾನೆ.
ಭಾರತೀಯ ಸೇನೆಯ ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬದ ವಿರುದ್ಧ ನೂರಾರು ಸೇನಾ ಆಕಾಂಕ್ಷಿಗಳು ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರಾಜಸ್ಥಾನದ ನಗೌರ್ ಜಿಲ್ಲೆಯವರಾದ ಸುರೇಶ್ ಭಿಚಾರ್, 350 ಕಿಲೋ ಮೀಟರ್ ದೂರವನ್ನು 50 ಗಂಟೆಗಳಲ್ಲಿ ಓಡಿ ತಲುಪಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ಸುರೇಶ್ ಭಿಚಾರ್ ಹೆದ್ದಾರಿಯಲ್ಲಿ ಓಡುತ್ತಿರುವ ವೀಡಿಯೋವನ್ನು ಎಎನ್ಐ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ.
“24 ವರ್ಷದ ನಾನು ರಾಜಸ್ಥಾನದ ನಾಗೌರ್ ಜಿಲ್ಲೆಯಿಂದ ಬಂದಿದ್ದೇನೆ. ಭಾರತೀಯ ಸೇನೆಗೆ ಸೇರುವುದಕ್ಕೆ ನಾನು ತಯಾರಿ ನಡೆಸುತ್ತಿದ್ದೇನೆ. ಆದರೆ ಕಳೆದ 2 ವರ್ಷಗಳಿಂದ ನೇಮಕಾತಿ ಆಗುತ್ತಿಲ್ಲ. ಪರೀಕ್ಷೆ ಮುಂದೂಡುತ್ತಿರುವುದರಿಂದ ನಾಗೌರ್, ಸಿಕರ್, ಜುಂಜುನು ಪ್ರದೇಶದ ಸೇನಾ ಆಕಾಂಕ್ಷಿಗಳಿಗೆ ವಯಸ್ಸಿನ ಮಿತಿ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಸಂಬಂಧಪಟ್ಟವರ ಗಮನ ಸೆಳೆಯಲು ಮತ್ತು ಯುವಕರನ್ನು ಸೇನೆಗೆ ಸೇರಲು ಉತ್ತೇಜಿಸುವ ಉದ್ದೇಶದಿಂದ ನಾನು ದೆಹಲಿಗೆ ಓಡುತ್ತಲೇ ಬಂದಿದ್ದೇನೆʼ ಎಂದು ಭಿಚಾರ್ ಹೇಳಿದ್ದಾರೆ.
ಬೆಳಗ್ಗೆ 4 ಗಂಟೆಗೆ ಓಟ ಪ್ರಾರಂಭಿಸುತ್ತಿದ್ದ ಭಿಚಾರ್, ರಾತ್ರಿ 11 ಗಂಟೆಯ ಬಳಿಕ ಪೆಟ್ರೋಲ್ ಪಂಪ್‌ಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ತಾನು ಉಳಿದುಕೊಳ್ಳುತ್ತಿದ್ದ ಸಮೀಪದ ಪ್ರದೇಶಗಳಲ್ಲಿನ ಸೇನಾ ಆಕಾಂಕ್ಷಿಗಳು ಆಹಾರ ನೀಡುತ್ತಿದ್ದರು ಎಂದು ಭಿಚಾರ್ ಹೇಳಿದ್ದಾರೆ. ಪ್ರಾದೇಶಿಕ ಸೈನ್ಯ (ಟೆರಿಟೋರಿಯಲ್ ಆರ್ಮಿ) ಸೇರಲು ತಯಾರಿ ನಡೆಸುತ್ತಿರುವ ಭಿಚಾರ್, ಮುಂದೆ ಭಾರತೀಯ ಸೇನೆಗೆ ಸೇರುವ ಉತ್ಸಾಹದಲ್ಲಿದ್ದಾರೆ. ಜಾನುವಾರುಗಳನ್ನು ಮಾರಾಟ ಮಾಡುವ ಮೂಲಕ ಪೋಷಕರು ತನ್ನ ಶಿಕ್ಷಣದ ವೆಚ್ಚ ಭರಿಸುತ್ತಿದ್ದಾರೆ ಎಂದು ಸುರೇಶ್ ಭಿಚಾರ್ ಬಹಿರಂಗಪಡಿಸಿದ್ದಾರೆ.
ವಾಯುಪಡೆಯು ಅಧಿಕಾರಿಗಳ ಮಟ್ಟದಲ್ಲಿ ನೇಮಕಾತಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಆದರೆ ಕೆಳ ಹುದ್ದೆಗಳಿಗೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಸುರೇಶ್ ಭಿಚಾರ್ ಆರೋಪಿಸಿದ್ದಾರೆ.