22,200 ಕೋಟಿ ಅಕ್ರಮದ ಬಗ್ಗೆ ಗೂಳಿಹಟ್ಟಿ ಶೇಖರ್ ಹೇಳಿಕೆ: ಸರ್ಕಾರದ ಹಾಡು-ಪಾಡಿನ ಬಗ್ಗೆ ನಿಮ್ಮವರೆ ಪ್ರಮಾಣಪತ್ರ ಕೊಟ್ಟಿದ್ದಾರೆ ಎಂದ ಜೆಡಿಎಸ್

Prasthutha|

ಬೆಂಗಳೂರು: ಜಲಸಂಪನ್ಮೂಲ ಇಲಾಖೆಯ 22,200 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂದು ಸ್ವತಃ ರಾಜ್ಯ ಬಿಜೆಪಿ ಸರ್ಕಾರದ ಶಾಸಕ ಹಾಗೂ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೂಳಿಹಟ್ಟಿ ಶೇಖರ್ ಅವರು ಆರೋಪಿಸಿದ್ದಾರೆ. ಸಿಎಂ ಬೊಮ್ಮಾಯಿ ಅವರೆ, ಸರ್ಕಾರದ ಹಾಡು-ಪಾಡಿನ ಬಗ್ಗೆ ನಿಮ್ಮವರೆ ಪ್ರಮಾಣಪತ್ರ ಕೊಟ್ಟಿದ್ದಾರೆ, ನೋಡಿ ಎಂದು ಜೆಡಿಎಸ್ ಕುಟುಕಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್, ರಾಜ್ಯ ಸರ್ಕಾರವು ಭ್ರಷ್ಟಾಚಾರದ ಕೂಪದಲ್ಲಿ ಬಿದ್ದಿದೆ ಎಂದು ಸಕಾರಣವಾಗಿ ವಿರೋಧ ಪಕ್ಷಗಳು ಟೀಕಿಸುವುದು ಒಂದು ಕಡೆ ಇರಲಿ; ಸ್ವತಃ ನಿಮ್ಮವರೇ ಈ ಕುರಿತು ಬಾಯಿಬಿಡುತ್ತಿರುವುದು ಏನನ್ನು ಹೇಳುತ್ತಿದೆ? ತಮ್ಮ ಲೂಟಿಕೋರತನವು ಚೆನ್ನಾಗಿಯೇ ಪ್ರತಿಫಲಿತವಾಗಿದೆ ಅಲ್ಲವೆ, ಸಿಎಂ ಬೊಮ್ಮಾಯಿ ಅವರೆ? ಲಜ್ಜೆಗೆಟ್ಟವರೆಂದು ತಮ್ಮವರೇ ಹೇಳಿದಂಗಾಗಿದೆ ಅಲ್ಲವೆ! ಎಂದು ಪ್ರಶ್ನಿಸಿದೆ.
ಇಲಾಖೆಯ ವಿವಿಧ ನಿಗಮಗಳ ಹಲವು ಕಾಮಗಾರಿಗಳಲ್ಲಿ ಇಷ್ಟು ದೊಡ್ಡ ಮೊತ್ತದ ಟೆಂಡರ್ ಅಕ್ರಮ ನಡೆದಿದ್ದು, ಟೆಂಡರ್ ಕೂಡಲೇ ರದ್ದುಪಡಿಸಬೇಕೆಂದು ಗೂಳಿಹಟ್ಟಿ ಶೇಖರ್ ಅವರು ಇಲಾಖೆಯ ಅಪರ ಕಾರ್ಯದರ್ಶಿಗೆ ದೂರು ನೀಡಿರುವ ಗಂಭೀರ ಸುದ್ದಿ ಈಗ ಬಹಿರಂಗವಾಗಿದೆ. ಮಾನಗೇಡಿತನದ ತುತ್ತ-ತುದಿ ಎಂದರೆ ಇದೇ ಇರಬೇಕು ಎಂದು ಜೆ.ಡಿ.ಎಸ್ ಟೀಕಿಸಿದೆ.
ನಿಗದಿತ ಕಾಮಗಾರಿಗಳ ಟೆಂಡರ್ ನೀಡುವ ಮುನ್ನವೇ ಅಕ್ರಮ ಕೂಟ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಶಾಸಕರಿಗೆ ಯಾವ ಕಾರಣಕ್ಕೆ ಜ್ಞಾನೋದಯವಾಗಿರಬಹುದು? ಕಮಿಷನ್ ದೊರೆಯಲಿಲ್ಲ ಎಂಬ ಕಾರಣವೊ? ಅಥವಾ ಜನದ್ರೋಹದ ಬಗ್ಗೆ ತಾಳಲಾರದ ಒಡಲ ಆಕ್ರೋಶವೊ? ಎಂದು ಜೆಡಿಎಸ್ ಪ್ರಶ್ನಿಸುತ್ತಿದೆ.
ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಪಾರದರ್ಶಕತೆ ಕಾಪಾಡಿಕೊಳ್ಳದೇ, ಕೆಲವೇ ದಿನಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಕಾಮಗಾರಿಗಳ ಟೆಂಡರ್ ಪೂರ್ಣಗೊಳಿಸಲಾಗಿದೆ. ಇದೇನು ಸರ್ಕಾರವೊ ಅಥವಾ ಕಾಳಸಂತೆ ವ್ಯಾಪಾರವೊ? ಇದು ನೀಚತನದ ಪರಮಾವಧಿ ಅಲ್ಲವೆ? ಕೇವಲ ಒಂದು ಇಲಾಖೆಯ ಕತೆಯೇ ಹೀಗಿದೆ ಎಂದು ಜೆ.ಡಿ.ಎಸ್ ಹೇಳಿದೆ.

Join Whatsapp