ಮುಂಬೈ: ರಷ್ಯಾ- ಉಕ್ರೇನ್ ಯುದ್ಧದಿಂದ ಸಂತ್ರಸ್ತರಾದ ಮಾರ್ಷೆಲ್ಸ್ ದ್ವೀಪದ ಧ್ವಜ ಹೊಂದಿರುವ ವ್ಯಾಪಾರಿ ಹಡಗಿನ 21 ಮಂದಿ ಭಾರತೀಯ ನಾವಿಕರು ದಕ್ಷಿಣ ಉಕ್ರೇನ್‌ನ ಮೈಕೊಲೇವ್ ಬಂದರಿನಿಂದ ಸುರಕ್ಷಿತವಾಗಿ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಹಡಗಿನ ಸಿಬ್ಬಂದಿ, ಯುದ್ಧ ಪ್ರಾರಂಭವಾದ ಫೆಬ್ರವರಿ 25ರಿಂದ ಹಡಗಿನಲ್ಲೇ ಕಾಲ ಕಳೆಯುತ್ತಿದ್ದು,ಬಂದರಿನಲ್ಲಿ ಕೆಲಸ ಸ್ಥಗಿತಗೊಂಡು ಲಂಗರು ಹಾಕಿರುವ ಹಡಗುಗಳ ಪೈಕಿ ಇದು ಕೂಡಾ ಒಂದಾಗಿದೆ. ಇದೀಗ ರಷ್ಯನ್ ಪಡೆಗಳು ಕಪ್ಪುಸಮುದ್ರ ಕರಾವಳಿಯ ಪ್ರಮುಖ ಸರಕು ಸಾಗಾಣಿಕಾ ತಾಣವಾದ ಈ ಬಂದರು ನಗರದತ್ತ ಮುನ್ನುಗ್ಗುತ್ತಿವೆ.
ಮೈಕೊಲೇವ್‌ನಲ್ಲಿ ತಮ್ಮ ಮಾಸ್ಟ್ ಅನ್ನು ಇಳಿಸಿರುವ ಹಲವು ಹಡಗುಗಳು ತಮ್ಮ ರಾಷ್ಟ್ರೀಯತೆಯ ಗುರುತು ಪತ್ತೆಯಾಗದಂತೆ ಎಚ್ಚರಿಕೆ ವಹಿಸಿದ್ದು, ಹೀಗೆ ಅತಂತ್ರವಾಗಿರುವ 21 ನಾವಿಕರ ಪೈಕಿ ನಾಲ್ಕು ಮಂದಿ ಮುಂಬೈನವರಾಗಿದ್ದಾರೆ. ಹಡಗಿಗೆ ಸಿಬ್ಬಂದಿಯನ್ನು ಪೂರೈಸಿರುವ ಮುಂಬೈನ ವಿ.ಆರ್. ಮೆರಿಟೈಮ್‌ನ ಪ್ರಧಾನ ಕಾರ್ಯದರ್ಶಿಯವರು ಭಾರತದ ರಾಜತಾಂತ್ರಿಕ ಸಿಬ್ಬಂದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಮೆಕ್ಕೆಜೋಳ ಲೋಡ್ ಮಾಡುವ ಸಲುವಾಗಿ ಫೆಬ್ರವರಿ 22ರಂದು ಮೈಕೊಲೇವ್‌ನಲ್ಲಿ ಲಂಗರು ಹಾಕಿದ್ದ ಈ ಹಡಗು ಫೆಬ್ರವರಿ 25ರಂದು ಹೊರಡಬೇಕಿತ್ತು. ಆದರೆ ದಾಳಿಯ ಪರಿಣಾಮವಾಗಿ ಕಪ್ಪು ಸಮುದ್ರದಲ್ಲಿ ತಡೆ ಒಡ್ಡಿರುವುದರಿಂದ ಹೊರಡಲು ಅಸಾಧ್ಯವಾಗಿದೆ. ಪಡಿತರ ಮೂಲಕ ನಮಗೆ ನೀರು ಪೂರೈಸಲಾಗುತ್ತಿದೆ. ಸದ್ಯಕ್ಕೆ ಆಹಾರ ಮತ್ತುನೀರಿನ ಕೊರತೆ ಇಲ್ಲ. ಹಲವು ಇತರ ಹಡಗುಗಳು ಕೂಡಾ ಸಿಲುಕಿಕೊಂಡಿದ್ದು ಬಂದರಿನಿಂದ ಹೊರಗೆ ಹೋಗುವುದು ಸುರಕ್ಷಿತವಲ್ಲ. ಬಂದರು ಕಾರ್ಯಾಚರಣೆ ಆರಂಭವಾದ ಬಳಿಕ ನಾವು ಸುರಕ್ಷಿತವಾಗಿ ಹೊರಬರುತ್ತೇವೆ ಎಂಬ ನಿರೀಕ್ಷೆ ಇದೆ ಎಂದು ಹಡಗಿನ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.