ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿಯಿರುವಂತೆಯೇ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಈಗಾಗಲೇ ತಯಾರಿ ಆರಂಭಿಸಿವೆ. ಆಡಳಿತಾರೂಢ ಡಿಎಂಕೆ ಮುಂದಿನ ಚುನಾವಣೆಯಲ್ಲೂ ಗೆದ್ದು ಅಧಿಕಾರಕ್ಕೆ ಬರಲು ಕಸರತ್ತು ಆರಂಭಿಸಿದೆ. ಈ ಮಧ್ಯೆ ಒಂದು ಹೆಜ್ಜೆ ಮುಂದೆ ಹೋಗಿರುವ ತಮಿಳಗ ವೆಟ್ರಿ ಕಳಗಂ(TVK) ಸಿಎಂ ಅಭ್ಯರ್ಥಿಯನ್ನು ಘೋಷಿಸಿದೆ. ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಶುಕ್ರವಾರ ಘೋಷಿಸಿದೆ.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಪಕ್ಷದ ಸದಸ್ಯತ್ವ ನೋಂದಣಿ ಚಾಲನೆ ನೀಡಿದ್ದು, ಮನೆಗೆ ಮನೆಗೆ ತೆರಳಿ ನೋಂದಣಿ ಆರಂಭಿಸಲಾಗಿದೆ. ಪಕ್ಷದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಸುಮಾರು 2 ಕೋಟಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳುವ ಗುರಿ ಹೊಂದಲಾಗಿದೆ.
ಮತ್ತೊಂದೆಡೆ ಪ್ರತಿಪಕ್ಷ ಎಐಎಡಿಎಂಕೆ (AIADMK)ಬಿಜೆಪಿ ಮೈತ್ರಿಕೂಟ ಕೂಡಾ ಈ ಬಾರಿ ಶತಯಗತಾಯ ಅಧಿಕಾರ ಹಿಡಿಯುವ ಶಪಥ ನೀಡಿದ್ದು, ಒಗ್ಗಟ್ಟಾಗಿ ಚುನಾವಣೆ ನಡೆಸಲು ತಯಾರಿ ನಡೆಸುತ್ತಿವೆ.
ಇಂದು ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದಳಪತಿ ವಿಜಯ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅಂಗೀಕರಿಸಲಾಗಿದೆ. ಅಲ್ಲದೇ ಮುಂದಿನ ತಿಂಗಳು ಬೃಹತ್ ಸಮಾವೇಶ ಆಯೋಜಿಸಲು ಪ್ರಸ್ತಾಪಿಸಲಾಗಿದೆ. ಪಕ್ಷದ ಸಿದ್ಧಾಂತವನ್ನು ಜನರಿಗೆ ತಲುಪಿಸಲು ಹಳ್ಳಿಗಳಲ್ಲಿ ಸಾರ್ವಜನಿಕ ಸಭೆ ಆಯೋಜಿಸಲು ಪಕ್ಷ ನಿರ್ಧರಿಸಿದೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಡಿಎಂಕೆ ಅಥವಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಜೆಪಿ ತಮಿಳುನಾಡಿನಲ್ಲಿ ಬೆಳೆಯಲು ಸಾಧ್ಯವಿಲ್ಲ ಎಂದು ವಿಜಯ್ ಹೇಳಿದ್ದಾರೆ. ರಾಜಕೀಯ ಲಾಭಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ನಾವು ಡಿಎಂಕೆ ಅಥವಾ ಎಐಎಡಿಎಂಕೆ ರೀತಿಯ ಪಕ್ಷ ಅಲ್ಲ. ನಾವು ಟಿವಿಕೆ ಎಂದು ವಿಜಯ್ ಹೇಳಿದ್ದು, ಆ ಎರಡೂ ಪಕ್ಷಗಳಲ್ಲಿ ಇಲ್ಲದ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರ್ಣಯದಲ್ಲಿ ಒಪ್ಪಿಗೆ ನೀಡಲಾಗಿದೆ.