ಬೆಂಗಳೂರು: 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕನಿಷ್ಠ 100 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಗುರಿ ಹೊಂದಿದೆ ಎಂದು ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ತಿಳಿಸಿದ್ದಾರೆ.
ನಿನ್ನೆಯಷ್ಟೇ ಪಿಎಫ್ಐ ಸೇರಿ 7 ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಇದರ ಬೆನ್ನಲ್ಲೇ ಚುನಾವಣೆಗೆ ಪೂರ್ವ ಸಿದ್ಧತೆ ಆರಂಭಿಸಿರುವ ಎಸ್ ಡಿಪಿಐ, ನಾವು ಚುನಾವಣಾ ರಾಜಕೀಯದಲ್ಲಿದ್ದೇವೆ. ಪಕ್ಷವು ದಲಿತರು, ಆದಿವಾಸಿಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಇತರರು ಆರಂಭಿಸಿರುವ ಒಂದು ಚಳುವಳಿಯಾಗಿದೆ. ನಾವು ನಮ್ಮ ಹಾದಿಯಲ್ಲಿ ಮುಂದುವರಿಯುತ್ತೇವೆ. ಮುಂಬರುವ ಚುನಾವಣೆಯಲ್ಲಿ ಕನಿಷ್ಠ 100 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಎಸ್ ಡಿಪಿಐ ಇನ್ನೂ ವಿಧಾನಸಭೆಗೆ ಪ್ರವೇಶಿಸಿಲ್ಲ. ಈ ಬಾರಿ ವಿಧಾನಸಭೆಗೆ ಪ್ರವೇಶಿಸಲು ಭಗೀರಥ ಪ್ರಯತ್ನ ಪಡುತ್ತಿದೆ. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹೆಚ್ಚಿನ ಬೆಂಬಲ ಪಡೆದಿದ್ದು, ವಿಶೇಷವಾಗಿ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.
2013 ರ ವಿಧಾನಸಭಾ ಚುನಾವಣೆಯಲ್ಲಿ ಎಸ್ ಡಿಪಿಐ 23 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಸ್ಪರ್ಧಿಸಿದ ಸ್ಥಾನಗಳಲ್ಲಿ 3.27% ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. 2018ರಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ ಇಸಿಐ ಡೇಟಾ ಪ್ರಕಾರ ಅಂತಿಮವಾಗಿ ಚುನಾವಣೆಗೆ ಹೋದ ಮೂರು ಸ್ಥಾನಗಳಲ್ಲಿ 10.50% ಗಳಿಸಿ ತನ್ನ ಸಾಮರ್ಥ್ಯವನ್ನು ತೋರಿಸಿತ್ತು.
2018 ರಲ್ಲಿ ಸ್ಪರ್ಧಿಸಿದ್ದ ಎಲ್ಲಾ ಮೂರು ಕ್ಷೇತ್ರಗಳಲ್ಲಿ ಎಸ್ ಡಿಪಿಐ 45,781 ಮತಗಳನ್ನು ಪಡೆದುಕೊಂಡಿತ್ತು. 2013 ರಲ್ಲಿ 98,249 ಮತಗಳು ಪಡೆದಿದ್ದು, ಮತ ಹಂಚಿಕೆ 0.12% ನಷ್ಟಿದೆ. ಗ್ರಾಮ ಮತ್ತು ತಾಲೂಕು ಪಂಚಾಯತ್ ಗಳಲ್ಲಿ 350ಕ್ಕೂ ಹೆಚ್ಚು ಚುನಾಯಿತ ಪ್ರತಿನಿಧಿಗಳನ್ನು ಹೊಂದಿದೆ ಮತ್ತು ಅವರಲ್ಲಿ ಕನಿಷ್ಠ ಮೂರು ಗ್ರಾಮಪಂಚಯತ್ ನಲ್ಲಿ ಅಧಿಕಾರದಲ್ಲಿದೆ ಎಂದು ರಿಯಾಝ್ ಕಡಂಬು ತಿಳಿಸಿದ್ದಾರೆ.