2023ರ ಚುನಾವಣೆ ನಂತರ ನಾನೇ ಸಿಎಂ: ಎಚ್ ಡಿಕೆ

Prasthutha|

ಹಿಂದುತ್ವವನ್ನು ಬಿಜೆಪಿಗೆ ಗುತ್ತಿಗೆ ಕೊಟ್ಟಿಲ್ಲ

- Advertisement -

ಬೆಂಗಳೂರು: 2023ರ ಚುನಾವಣೆಯಲ್ಲಿ ಕನ್ನಡಿಗರಿಂದ, ಕನ್ನಡಿಗರಿಗಾಗಿ, ಕನ್ನಡಿಗರದ್ದೇ ಆದ ಸರಕಾರ ಬರಬೇಕಿದೆ ಎಂದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಪಾದಿಸಿದರು.


ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಜನತಾಮಿತ್ರ ಅಭಿಯಾನದ ಮೊದಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ನಾನು ಮುಖ್ಯಮಂತ್ರಿ ಆಗಿಯೇ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

- Advertisement -


ಈ ಬಾರಿ ಒಮ್ಮೆ ಅಧಿಕಾರ ಕೊಡಿ. ಪ್ರಾಮಾಣಿಕ ಆಡಳಿತ ಕೊಡುತ್ತೇನೆ. ನಿಮ್ಮ ನಿರೀಕ್ಷೆಗಳನ್ನು ಈಡೇರಿಸಿ ಬಲಿಷ್ಠ, ಸ್ವಚ್ಛ, ಸುಂದರ ಬೆಂಗಳೂರು ನಗರವನ್ನು ನಿರ್ಮಿಸುತ್ತೇನೆ. ದಾಸರಹಳ್ಳಿ ಮಾತ್ರವಲ್ಲ, ಅಕ್ಕಪಕ್ಕದ ಕ್ಷೇತ್ರಗಳು, ಬೆಂಗಳೂರಿನ 28 ವಿಧಾನಸಭೆ ಕ್ಷೇತ್ರಗಳಲ್ಲಿ ಕೂಡ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.


ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಚುನಾವಣೆ ಹತ್ತಿರ ಬಂದಾಗ ನಿದ್ದೆಯಿಂದ ಎದ್ದು ಕೂತಿವೆ. ವಿಧಾನಸೌಧ ಮತ್ತು ಬಿಬಿಎಂಪಿಯಲ್ಲಿ ಆಡಳಿತ ನಡೆಸಿವೆ. ಬಿಜೆಪಿಯಂತೂ ಹಿಂದುತ್ವ ಎಂದು ಜನರನ್ನು ದಿಕ್ಕು ತಪ್ಪಿಸುತ್ತಿದೆ. ನಾವು ಹಿಂದೂಗಳೇ. ಹಿಂದುತ್ವವನ್ನು ಬಿಜೆಪಿಗೆ ಗುತ್ತಿಗೆ ಕೊಟ್ಟಿಲ್ಲ. ದೇವಸ್ಥಾನಗಳನ್ನು ಕಟ್ಟಲು ನಮ್ಮ ಪಕ್ಷದ ದಾಸರಹಳ್ಳಿ ಶಾಸಕರು ಕೊಟ್ಟಷ್ಟು ಹಣಕಾಸು ನೆರವನ್ನು ಬಿಜೆಪಿ ಶಾಸಕರು ಕೊಟ್ಟಿಲ್ಲ ಎಂದು ಅವರು ಹೇಳಿದರು.


ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಪೋಷಕರು ಕಳಿಸುತ್ತಿಲ್ಲ. ಸರಕಾರ ಶಿಕ್ಷಣ ವ್ಯವಸ್ತೆಯನ್ನು ಹಾಳು ಮಾಡುತ್ತದೆ. ಪಾಠ ಮಾಡಲು ಶಿಕ್ಷಕರು ಇಲ್ಲ. ಬಡವರಿಗೆ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವ ಶಕ್ತಿ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ UKG ಯಿಂದ ಪಿಯುಸಿಯವರೆಗೂ ಉಚಿತ ಶಿಕ್ಷಣ ಕೊಡಲಾಗುವುದು ಎಂದರು ಅವರು.
ನಗರದಲ್ಲಿ ಬಡವರು, ಮಧ್ಯಮ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಗಗನ ಕುಸುಮವಾಗಿದೆ. ಇದಕ್ಕೆ ಪರಿಹಾರವಾಗಿ ಪ್ರತಿ ವಾರ್ಡ್ ನಲ್ಲಿಯೂ ಗಲ್ಲಿ ಕ್ಲಿನಿಕ್ ತೆರೆಯಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.


ನಾನು ಸಿಎಂ ಆಗಿದ್ದಾಗ ದಾಸರಹಳ್ಳಿ ಕ್ಷೇತ್ರಕ್ಕೆ 720 ಕೋಟಿ ಅನುದಾನ ನೀಡಿದ್ದೆ. ನಾನು ಅಧಿಕಾರ ಇಳಿದ ನಂತರ ಬಂದ ಬಿಜೆಪಿ ಅಷ್ಟು ಅನುದಾನವನ್ನು ತಡೆಯಿತು. ಆಮೇಲೆ ಹೈಕೋರ್ಟ್ ಛೀಮಾರಿ ಹಾಕಿದ ನಂತರ ಸ್ವಲ್ಪ ಅನುದಾನ ಬಂತು. ಸ್ವತಃ ನಾನೇ ಶಾಸಕ ಮಂಜುನಾಥ್ ಅವರಣ್ ಅವರನ್ನು ಕರೆದುಕೊಂಡು ಹೋಗಿ ಅಂದಿನ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅನುದಾನ ಬಿಡುಗಡೆಗೆ ಮನವಿ ಮಾಡಿದ್ದೆ. ಆದರೂ ಹಣ ಬಿಡುಗಡೆ ಆಗಿಲ್ಲ. ಈಗಲೂ ಅನುದಾನ ಬಿಡುಗಡೆ ಸರಿಯಾಗಿ ಆಗ್ತಿಲ್ಲ. ಈ ಸರಕಾರ ಶಾಸಕರಿಗೆ ಅನುದಾನ ನೀಡಿಕೆಯಲ್ಲಿ ತಾರತಮ್ಯ ಎಸಗುತ್ತಿದೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಶಾಸಕ ಮಂಜುನಾಥ್ ಅವರು ಮಾತನಾಡಿದರು. ಕ್ಷೇತ್ರದ ಅನೇಕ ಮುಖಂಡರು ಭಾಗಿಯಾಗಿದ್ದರು.
ಇದೇ ವೇಳೆ ಜನರು ಜನತಾ ಮಿತ್ರ ಎಲ್ ಇ ಡಿ ಪರದೆಯಲ್ಲಿ ಬೆಂಗಳೂರು ನಗರಕ್ಕೆ ಹೆಚ್.ಡಿ.ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಅವರು ನೀಡಿದ ಕೊಡುಗೆಗಳ ದೃಶ್ಯಾವಳಿಯನ್ನು ತೋರಿಸಲಾಯಿತು. ಜತೆಗೆ, ಜನತಾ ಮಿತ್ರ ವಾಹನದಲ್ಲಿ, ಮುಂದೆ ಇಂಥ ಸರಕಾರ ಬೇಕು? ತಮ್ಮ ನಿರೀಕ್ಷೆಗಳೇನು? ಎಂಬ ಬಗ್ಗೆ ಜನರು ಸಲಹೆಗಳನ್ನು ದಾಖಲಿಸಿದರು.
ಕೆಲವರು ಸಲಹಾ ಪೆಟ್ಟಿಗೆಯಲ್ಲಿ ಅಭಿಪ್ರಾಯ ಬರೆದು ಹಾಕಿದರೆ, ಯುವಕರು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಸಲಹೆ ದಾಖಲಿಸಿದರು. ಮತ್ತೆ ಕೆಲವರು ವಾಹನದಲ್ಲಿದ್ದ ಟ್ಯಾಬ್ ನಲ್ಲಿ ಸಲಹೆ ಬರೆದು ಸೇವ್ ಮಾಡಿದರು.

Join Whatsapp