Home ಟಾಪ್ ಸುದ್ದಿಗಳು 2020ರ ಹತ್ರಾಸ್ ಗುಂಪು ಅತ್ಯಾಚಾರ ಕೊಲೆ ಪ್ರಕರಣ: ಮೂವರ ಬಿಡುಗಡೆ, ಓರ್ವನಿಗೆ ಮಾತ್ರ ಸಣ್ಣ ಪ್ರಮಾಣದ...

2020ರ ಹತ್ರಾಸ್ ಗುಂಪು ಅತ್ಯಾಚಾರ ಕೊಲೆ ಪ್ರಕರಣ: ಮೂವರ ಬಿಡುಗಡೆ, ಓರ್ವನಿಗೆ ಮಾತ್ರ ಸಣ್ಣ ಪ್ರಮಾಣದ ಶಿಕ್ಷೆ

ಲಕ್ನೋ: 2020ರಲ್ಲಿ ಉತ್ತರ ಪ್ರದೇಶದ ಹಾತ್ರಾಸ್’ನಲ್ಲಿ ನಡೆದ ಗುಂಪು ಅತ್ಯಾಚಾರ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಬಿಡುಗಡೆ ಮಾಡಿದ ಉತ್ತರ ಪ್ರದೇಶದ ನ್ಯಾಯಾಲಯ, ಓರ್ವನಿಗೆ ಶಿಕ್ಷೆ ವಿಧಿಸಿದೆ.


ಸಂದೀಪ್ ಠಾಕೂರ್’ಗೆ ಅತ್ಯಾಚಾರ ಕೊಲೆ ಹೊರತುಪಡಿಸಿ ಸಣ್ಣ ಅಪರಾಧದ ಶಿಕ್ಷೆ ನೀಡಲಾಗಿದೆ. ಸಂದೀಪ್’ನ ಮಾವ ರವಿ, ಆತನ ಮಿತ್ರರಾದ ಲವ್ಕುಶ್ ಮತ್ತು ರಾಮು ಎಂಬವರನ್ನು ನಿರಪರಾಧಿಗಳು ಎಂದು ಬಿಡುಗಡೆ ಮಾಡಲಾಗಿದೆ.


ದಿಲ್ಲಿಯಿಂದ 200 ಕಿಲೋಮೀಟರ್ ದೂರದ ಹಾತ್ರಾಸ್’ನಲ್ಲಿ 20ರ ಹರೆಯದ ದಲಿತ ಯುವತಿಯನ್ನು ಗುಂಪು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಆಕೆ ದಿಲ್ಲಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಳು.
ಗದ್ದೆಯಲ್ಲಿ ತಾಯಿ ಮತ್ತು ತಮ್ಮನೊಂದಿಗೆ ಹುಲ್ಲು ಕೀಳುತ್ತಿದ್ದಾಗ ನನ್ನನ್ನು ಬಾಯಿ ಮುಚ್ಚಿ ಎಳೆದೊಯ್ದಿದ್ದಾರೆ ಎಂದು ಆಕೆ ಸಾಯುವ ಮೊದಲು ಪೊಲೀಸರಿಗೆ ಹೇಳಿಕೆ ನೀಡಿದ್ದಳು.


ಆಕೆಯ ಕುಟುಂಬದವರನ್ನು ಮನೆಯೊಳಗೆ ಕೂಡಿ ಹಾಕಿ ಅಂದೇ ಮಧ್ಯರಾತ್ರಿ ಜಿಲ್ಲಾಡಳಿತವು ಆಕೆಯ ಅಂತ್ಯಕ್ರಿಯೆ ನಡೆಸಿತ್ತು. ಯೋಗಿ ಸರಕಾರವು ಇದರಲ್ಲಿ ತೀವ್ರ ಟೀಕೆಗೊಳಗಾಗಿತ್ತು.
2012ರ ನಿರ್ಭಯ ಗುಂಪು ಅತ್ಯಾಚಾರಕ್ಕಿಂತ ಕ್ರೂರವಾಗಿ ಆಕೆಯನ್ನು ಹಿಂಸಿಸಿ, ಅಂಗಾಂಗಗಳು ಕೀಲು ತಪ್ಪುವಂತೆ ಮಾಡಿದ್ದ ಗುರುತುಗಳು ಕಂಡು ಬಂದಿದ್ದವು. ಕುತ್ತಿಗೆಯ ಗಾಯ ಮತ್ತು ಮೃಗೀಯವಾಗಿ ಹಿಸುಕಿದ್ದರಿಂದ ಆಕೆ ಪಾರ್ಶ್ವವಾಯು ಪೀಡಿತಳಾಗಿ ಉಸಿರಾಡಲು ಕಷ್ಟ ಪಡುತ್ತಿದ್ದಳು ಎಂದು ವೈದ್ಯರು ಹೇಳಿದ್ದರು. ಆಕೆಯು ಕುತ್ತಿಗೆ ಹಿಸುಕುವವರನ್ನು ಕಚ್ಚಿದ್ದಾಳೆ ಎಂಬುದೂ ಸ್ಪಷ್ಟವಾಗಿದೆ.


ಉತ್ತರ ಪ್ರದೇಶದ ಪೊಲೀಸರು ಪ್ರಕರಣವನ್ನು ನಿಭಾಯಿಸುವಲ್ಲಿ ಎಡವಿದ್ದಾರೆ. ಮೊದಲು ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದರು. ಅನಂತರ ಆಕೆಯ ಹೇಳಿಕೆಯ ಮೇಲೆ ಅತ್ಯಾಚಾರ ಮೊಕದ್ದಮೆ ಸೇರಿಸಿದ್ದರು. ಎಲ್ಲ ಆರೋಪಿಗಳು ಮೇಲ್ಜಾತಿಗೆ ಸೇರಿದ ಗಂಡಸರಾಗಿದ್ದರು ಎಂದು ವರದಿಯಾಗಿದೆ.

Join Whatsapp
Exit mobile version