2019ರ ಜನಾದೇಶದ ವೈರುಧ್ಯಗಳ ವಿಶ್ಲೇಷಣೆ

0
14

♦ಸೈಯ್ಯದ್ ಅಲಿ ಮುಜ್ತಬ

ಭಾರತದ 2019ರ ಚುನಾವಣೆಯಲ್ಲಿ ವೈರುಧ್ಯಗಳು ಕಣ್ಣಿಗೆ ರಾಚುವಂತಿದ್ದವು. ಅಭೂತಪೂರ್ವ ಜನಾದೇಶ ಹಲವರನ್ನು ಆತಂಕಗೊಳಿಸಿತ್ತು. ಧಾರ್ಮಿಕ ಮತಾಂಧತೆ ಮತಗಳ ಮೂಲಕ ಜಾತ್ಯತೀತ ದೇಶವನ್ನು ಅಪಹರಿಸಿತ್ತು.

ಹಿಂದಿನ ಸರಕಾರದ ಅತಿರೇಕಗಳನ್ನು ಪ್ರಸಕ್ತ ಚುನಾವಣಾ ಯಶಸ್ಸು ಮರೆಮಾಚಿತ್ತು. ದೊಡ್ಡ ಗೆಲುವು ಸಣ್ಣ ಆದರೆ ಅರ್ಹ ಕಾರಣಗಳನ್ನು ಹೊಸಕಿ ಹಾಕಿತ್ತು. ಬಹುಸಂಖ್ಯಾತತೆ ಬಹುತ್ವವನ್ನು ನುಂಗಿತ್ತು.

ಗೆದ್ದವರು ಸ್ವಭಾವತಃ ವಿಭಜಕರಾಗಿದ್ದಾರೆ. ವಿರೋಧ ಪಕ್ಷ ತೀವ್ರ ಬಲಹೀನವಾಗಿದೆ, ಮಾಧ್ಯಮ ವರದಿಗಳು ಪಕ್ಷಪಾತದಿಂದ ಕೂಡಿವೆ ಮತ್ತು ಜನರು ತಮ್ಮ ಮೇಲೆ ಹೇರಲಾದ ಚುನಾವಣಾ ತೀರ್ಪಿನ ಬಗ್ಗೆ ಅಸಹಾಯಕರಾಗಿದ್ದಾರೆ.

ಬಹುಸಂಖ್ಯಾತರು ಒಪ್ಪಿದರು ಎಂಬ ಕಾರಣಕ್ಕೆ ಒಂದು ಸುಳ್ಳು ಎಂದೂ ನಿಜವಾಗುವುದಿಲ್ಲ, ತಪ್ಪು ಎಂದೂ ಸರಿಯಾಗುವುದಿಲ್ಲ ಮತ್ತು ಕ್ರೌರ್ಯ ಎಂದೂ ಒಳ್ಳೆಯದಾಗುವುದಿಲ್ಲ. ಇದು 2019ರ ಜನಾದೇಶದ ಒಳಾರ್ಥವಾಗಿದೆ.

ಸಾಮಾನ್ಯವಾಗಿ, ಎಲ್ಲ ಚುನಾವಣೆಯ ನಂತರ ಜನರಲ್ಲಿ ಒಂದು ರೀತಿಯ ಆಶಾವಾದ ಇರುತ್ತದೆ ಮತ್ತು ನೂತನ ಸರಕಾರದಿಂದ ಕೆಲವು ನಿರೀಕ್ಷೆಗಳು ಇರುತ್ತವೆ. ಆದರೆ ಇದೇ ಮೊದಲ ಬಾರಿ ಚುನಾವಣೆಯ ಫಲಿತಾಂಶ ನಿರಾಶಾದಾಯಕವಾಗಿದ್ದು ಫಲಿತಾಂಶ ಮಧ್ಯಾಹ್ನವೇ ಕತ್ತಲು ಆವರಿಸುವತೆ ಮಾಡಿದೆ.

2019ರ ಚುನಾವಣೆಯ ನಂತರ ಮೂರು ಅಪಾಯಕಾರಿ ವಿಷಯಗಳು ಕಾಣುತ್ತಿವೆ. ಮೊದಲನೆಯದಾಗಿ ಇದೇ ಮೊದಲ ಬಾರಿ ಮತದಾರರು ಚುನಾವಣೆಯ ನಂತರ ಉಸಿರುಕಟ್ಟಿದ ಭಾವವನ್ನು ಎದುರಿಸುತ್ತಿದ್ದಾರೆ. ಚುನಾವಣೆಯ ನಂತರ ಮಾಧ್ಯಮ ತನ್ನ ವಿಶ್ವಾಸಾರ್ಹ ಮುಖವನ್ನು ಕಳೆದುಕೊಂಡಿದೆ ಮತ್ತು ಇದೇ ಮೊದಲ ಬಾರಿ ದೇಶದಲ್ಲಿ ಜನರು ವಿಶ್ವಾಸದ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಮೂರನೇ ಮತ್ತು ಅಪಾಯಕಾರಿ ಬದಲಾವಣೆಯೆಂದರೆ, ಚುನಾವಣಾ ಫಲಿತಾಂಶದ ನಂತರ ವಿರೋಧ ಪಕ್ಷ ಭಯಭೀತಗೊಂಡಿದೆ.

ಎಲ್ಲ ವಿರೋಧ ಪಕ್ಷಗಳೂ 2019ರ ಜನಾದೇಶವನ್ನು ಒಪ್ಪಿಕೊಂಡಿರುವಂತೆ ಕಾಣುತ್ತದೆ ಮತ್ತು ಜನರು ಹಿಂದುತ್ವದ ಪರ ಮತ ಚಲಾಯಿಸಿದ್ದಾರೆ ಎಂದು ಮಾನಸಿಕವಾಗಿ ಒಪ್ಪಿಕೊಂಡಿದ್ದಾರೆ ಮತ್ತು ಇವರಲ್ಲಿ ಯಾರೂ ಇವಿಎಂಗಳನ್ನು ತಿರುಚಲಾಗಿತ್ತು ಅಥವಾ ಹಿಂದು ಮನಸ್ಸುಗಳನ್ನು ತಿರುಚಲಾಗಿತ್ತು ಎನ್ನುವುದನ್ನು ಒಪ್ಪಲು ಸಿದ್ಧರಿಲ್ಲ.

2019ರ ಜನಾದೇಶಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಆಳದಿಂದ ಪರೀಕ್ಷೆ ನಡೆಸಬೇಕಾದ ಇತರ ಹಲವು ವಿಶೇಷ ಬೆಳವಣಿಗೆಗಳು ಇವೆ. ದೇಶದ ಬಹುಸಂಖ್ಯಾತ ಜನರು ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳನ್ನು ತಿರಸ್ಕರಿಸಿರುವುದು ಯಾಕೆ? ಜನರು ಯಾಕೆ ತಮ್ಮ ಜಾತಿಯನ್ನೂ ಪರಿಗಣಿಸದೆ ಮಹಿಳಾ ಮತ್ತು ದಲಿತರ ವಿರೋಧಿಯಾಗಿರುವ ಮನುವಾದಿ ಪಕ್ಷಕ್ಕೆ ಮತ ಚಲಾಯಿಸಿದರು?

ನಾವು ಭಾರತೀಯ ಪ್ರಜಾಪ್ರಭುತ್ವದ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದಾದರೆ, ಬಿಜೆಪಿ ಮತ್ತು ಅದರ ಹಿಂದಿನ ಆವೃತ್ತಿ ಜನಸಂಘ  ದೀರ್ಘ ಕಾಲದವರೆಗೆ ಭಾರತೀಯರ ಮೊದಲ ಆಯ್ಕೆಯಾಗಿರಲಿಲ್ಲ. 1984ರಲ್ಲಿ ಬಿಜೆಪಿ ಸಾರ್ವತ್ರಿಕ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಗೆಲ್ಲುವವರೆಗೂ ಅದು ಮತದಾರನ ಅಂತಿಮ ಆಯ್ಕೆಯೇ ಆಗಿತ್ತು.

ಭಾರತದ ಪ್ರಜಾಪ್ರಭುತ್ವದ ಇತಿಹಾಸಕ್ಕೆ ತನ್ನದೇ ಆದ ವಿನ್ಯಾಸವಿದೆ ಮತ್ತು ಅದನ್ನು ಸಮೀಪದಿಂದ ಗಮನಿಸಿದಾಗ, ಸ್ವಾತಂತ್ರ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾರಣಕ್ಕೆ ಜನರು ಭಾರತೀಯ ರಾಷ್ಟ್ರೀಯ ಕಾಂಗ್ರೆಸನ್ನೇ ಮೊದಲ ಆಯ್ಕೆಯನ್ನಾಗಿಸಿದ್ದರು.

ಸ್ವತಂತ್ರ ಬಂದ ಬಳಿಕ ಕಾಂಗ್ರೆಸ್, ದೇಶದಿಂದ ಬಡತನ ನಿರ್ಮೂಲನೆ, ನೂತನ ಭಾರತದ ನಿರ್ಮಾಣ ಮತ್ತು ವೈವಿಧ್ಯತೆಯಲ್ಲಿ ಏಕತೆಯ ತತ್ವಕ್ಕೆ ಅಂಟಿಕೊಂಡಿರುವುದು ಹೀಗೆ ಹಲವು ಘೋಷವಾಕ್ಯಗಳನ್ನು ನೀಡಿತ್ತು.

ಆದರೆ 1968ರಲ್ಲಿ ಪ್ರಾದೇಶಿ ಮತ್ತು ಎಡಪಕ್ಷಗಳು ಚುನಾವಣಾ ಕಣದಲ್ಲಿ ಮಿಂಚಲು ಆರಂಭಿಸಿದ ನಂತರ ಕಾಂಗ್ರೆಸ್ ಪ್ರಭಾವ ಕ್ಷೀಣಿಸುತ್ತಾ ಬಂದಿತ್ತು. ಇದರ ಆರಂಭ ತಮಿಳುನಾಡಿನಲ್ಲಿ ಆರಂಭವಾಯಿತು. ಅಲ್ಲಿ ಡಿಎಂಕೆ ಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‌ನ್ನು ಮೂಲೆಗುಂಪಾಗಿಸಿತು. ನಂತರ ಇದು ಜನಪ್ರಿಯಗೊಂಡು ಜನರು ಪ್ರಾಂತೀಯ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಲು ಆರಂಭಿಸಿದರು.

ಆದರೆ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ತನ್ನ ಅಧಿಪತ್ಯವನ್ನು, 1977, 1989 ಮತ್ತು 1996ರ ಸಂಕ್ಷಿಪ್ತ ತಡೆಯ ಹೊರತೂ 1998ರವರೆಗೂ ಮುಂದುವರಿಸಿತು.

1977ರ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷ ಕಾಂಗ್ರೆಸ್ ಅಧಿಪತ್ಯಕ್ಕೆ ಸವಾಲೆಸೆಯಿತು ಮತ್ತು ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಸರಕಾರ ರಚಿಸಿತು. ಆದರೆ 1979ರಲ್ಲಿ ವಿಶ್ವಾಸಮತ ಗಳಿಸುವಲ್ಲಿ ವಿಫಲವಾಗಿ ಕೆಳಗಿಳಿಯಿತು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ 1989ರಲ್ಲಿ ಬೋಫೋರ್ಸ್ ಹಗರಣ ಹಿನ್ನೆಲೆಯಲ್ಲಿ ವಿಶ್ವಾಸಮತ ಕೊರತೆ ಅನುಭವಿಸಿ ಅಧಿಕಾರ ಕಳೆದುಕೊಂಡಿತು. 1991ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೇರಿತು ಮತ್ತು 1996ರವರೆಗೆ ಅಧಿಕಾರ ನಡೆಸಿತು. ಈ ವೇಳೆ ಪಿ.ವಿ ನರಸಿಂಹ ರಾವ್ ಪ್ರಧಾನಿಯಾಗಿದ್ದರು.

1984ರ ಸೋಲಿನ ನಂತರ ಬಿಜೆಪಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಅಭಿಯಾನದ ಮೂಲಕ ಪಕ್ಷ ಮರುಸಂಘಟಿಸುವ ಕಾರ್ಯಕ್ಕೆ ಕೈಹಾಕಿತು. ರಾಮ ಜನ್ಮಭೂಮಿ ಅಭಿಯಾನ ಬಿಜೆಪಿಗೆ ಚುನಾವಣೆಯಲ್ಲಿ ಬಹುದೊಡ್ಡ ಉಡುಗೊರೆಯನ್ನೆ ನೀಡಿತು. ಮತ್ತು 80ರ ದಶಕದ ಕೊನೆಯಲ್ಲಿ ಕೇಸರಿಪಕ್ಷ ಭಾರತೀಯ ರಾಜಕೀಯದ ಕೇಂದ್ರ ಸ್ಥಾನಕ್ಕೆ ಬಂದು ನಿಂತಿತು.

ಬಿಜೆಪಿಯ ಓಟವನ್ನು ನಿಲ್ಲಿಸುವ ಉದ್ದೇಶದಿಂದ 1989ರಲ್ಲಿ ಅಂದಿನ ಪ್ರಧಾನಿ ವಿ.ಪಿ ಸಿಂಗ್, ಸರಕಾರಿ ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ.27 ಮೀಸಲಾತಿ ನೀಡಬೇಕು ಎನ್ನುವ ಮಂಡಲ ಆಯೋಗದ ಶಿಫಾರಸ್ಸನ್ನು ಒಪ್ಪಿಕೊಂಡರು. ಇದು ಭಾರತೀಯ ರಾಜಕೀಯ ಇತಿಹಾಸದಲ್ಲಿ ಬಹಳ ಪ್ರಮುಖ ಬೆಳವಣಿಗೆಯಾಗಿತ್ತು. ಇದರ ಹಿನ್ನೆಲೆಯಲ್ಲಿ ದೇಶದಲ್ಲಿ ಹಿಂದುತ್ವ ಗುಂಪುಗಳು ಮತ್ತು ಹಿಂದುಳಿದ ಜಾತಿ ವರ್ಗಗಳ ಮಧ್ಯೆ ಸಂಘರ್ಷ ಆರಂಭವಾಯಿತು.

ಈ ಸಂಘರ್ಷ ಉತ್ತರ ಭಾರತದಲ್ಲಿ ಮಂಡಲದ ವಿರುದ್ಧ ಕಮಂಡಲ ಎಂದೇ ಜನಪ್ರಿಯಗೊಂಡಿತ್ತು. ಉತ್ತರ ಭಾರತದಲ್ಲಿಯೇ ಹಿಂದು ರಾಷ್ಟ್ರವಾದಿ ಮನುವಾದಿಗಳು ಮತ್ತು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ನಿರ್ಲಕ್ಷಿತರಾದ ಹಿಂದುಳಿದ ಜಾತಿ ವರ್ಗಗಳ ನಡುವೆ ಹೆಚ್ಚು ಸಂಘರ್ಷಗಳು ನಡೆದವು.

ಈ ಸಂಘರ್ಷ 1996 ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪಷ್ಟವಾಗಿತ್ತು. ಅಂದು ಬಿಜೆಪಿ ಅಧಿಕಾರಕ್ಕೇರಿದರೂ ವಿಶ್ವಾಸಮತ ಯಾಚನೆಯಲ್ಲಿ ವಿಫಲವಾಗುವ ಮೂಲಕ 13 ದಿನಕ್ಕೇ ಕೆಳಗಿಳಿಯಿತು. ನಂತರ ಸಮಾಜವಾದಿ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿದು ದೇವೇ ಗೌಡ ಮತ್ತು ಐ.ಕೆ ಗುಜ್ರಾಲ್ ಮುಂತಾದವರು ಪ್ರಧಾನಿಗಳಾಗಿ ದೇಶವನ್ನು ಮುನ್ನಡೆಸಿದರು. 1998ರಲ್ಲಿ ನಡೆದ ಸಾಮಾನ್ಯ ಚುನಾವಣೆಯಲ್ಲಿ ಬಿಜೆಪಿ ಪರ ನಿರ್ಣಾಯಕ ಜನಾದೇಶ ದೊರಕಿತು. ಈ ಸರಕಾರ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದಲ್ಲಿ 2004ರ ವರೆಗೆ ಅಧಿಕಾರ ನಡೆಸಿತು.

ನಂತರ ಕಾಂಗ್ರೆಸ್ ಮನ್‌ಮೋಹನ್ ಸಿಂಗ್ ಅವರ ನಾಯಕತ್ವದಲ್ಲಿ 2004ರಿಂದ 2014ರವರೆಗೆ ಎರಡು ಅವಧಿಗೆ ಸರಕಾರ ರಚಿಸಿತು. ಭ್ರಷ್ಟಾಚಾರ ಮತ್ತು ಕಳಪೆ ಆಡಳಿತ ಆರೋಪಗಳನ್ನು ಎದುರಿಸುವ ಮೂಲಕ 2014ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವಗೊಂಡಿತು ಮತ್ತು ನರೇಂದ್ರ ಮೋದಿ ನಾಯಕತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತು. ಮೋದಿ ದೇಶದ ಕೋಟ್ಯಂತರ ಜನರ ಮನಸ್ಸಿನಲ್ಲಿ ಭರವಸೆ ಮತ್ತು ನಿರೀಕ್ಷೆಯನ್ನು ಹುಟ್ಟಿಸಿದ್ದರು.

ಹಿಂದು ರಾಷ್ಟ್ರೀಯತೆ ಪಟ್ಟಿಯೊಂದಿಗೆ ಬಂದ ನರೇಂದ್ರ ಮೋದಿ ಸರಕಾರ ದೇಶವನ್ನು ಆರ್ಥಿಕ ಸೂಪರ್ ಪವರ್ ಮಾಡುವ ಭರವಸೆಯೊಂದಿಗೆ ಅಧಿಕಾರ ಹಿಡಿದಿತ್ತು. ಆದರೆ ಮೋದಿ ಸರಕಾರದ ಮೊದಲ ಐದು ವರ್ಷಗಳಲ್ಲಿ ವಿಭಜಕ ಆಂತರಿಕ ರಾಜಕೀಯದ ಮೂಲಕ ಭಾರತದ ಕೋಮು ಸೌಹಾರ್ದವನ್ನು ನಾಶಪಡಿಸುವುದಕ್ಕೆ ಸಾಕ್ಷಿಯಾಯಿತು. ಆರ್ಥಿಕತೆಯ ವಿಷಯದಲ್ಲಿ ಮೋದಿ ಸರಕಾರ ಹೇಳಿಕೊಳ್ಳುವಂತಹ ಯಾವುದೇ ಸಾಧನೆಯನ್ನು ಮಾಡಿಲ್ಲ ಮತ್ತು ವಿದೇಶಾಂಗ ವ್ಯವಹಾರದ ವಿಷಯದಲ್ಲೂ ನೆರೆರಾಷ್ಟ್ರದ ಜೊತೆ ಶಾಂತಿ ಕಾಪಾಡುವಲ್ಲಿ ವಿಫಲವಾಗಿದೆ ಮತ್ತು ಜಾಗತಿಕವಾಗಿ ಭಾರತದ ಇತರ ದೇಶಗಳ ಜೊತೆಗಿನ ಸಂಬಂಧದ ಕುರಿತು ಕೇವಲ ಬೊಬ್ಬೆಗಳೇ ಹೆಚ್ಚಾಗಿವೆ.

ಒಟ್ಟಾರೆಯಾಗಿ ಜನರತ್ತ ತೆರಳಲು ಹೇಳಿಕೊಳ್ಳುವಂತಹ ದೊಡ್ಡ ಸಾಧನೆ ಮೋದಿ ಬಳಿಯಿರಲಿಲ್ಲ. ಹಾಗಾಗಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ತನ್ನ ಲೋಪಗಳನ್ನು ಮರೆಮಾಚಲು ಮೋದಿ, ರಾಷ್ಟ್ರೀಯ ಭದ್ರತೆ ಮತ್ತು ಹಿಂದು ರಾಷ್ಟ್ರವಾದ ಆಧಾರಿತ ಚುನಾವಣಾ ಅಭಿಯಾನವನ್ನು ಪರಿಣಾಮಕಾರಿಯಾಗಿ ರೂಪಿಸಿದರು. ಇದು ಭಾರತದ ಮತದಾರರಲ್ಲಿ ಕೃತಕ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರನ್ನು ಸೃಷ್ಟಿಸಿದ ಧಾರ್ಮಿಕ ರಾಷ್ಟ್ರವಾದದ ಸ್ಫೋಟಕ ಮಿಶ್ರಣವಾಗಿತ್ತು.

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಇದೇ ಮೊದಲ ಬಾರಿ ದೇಶದಲ್ಲಿ ಎಡ, ಜಾತ್ಯತೀತ, ಪ್ರಜಾಪ್ರಭುತ್ವ ಶಕ್ತಿಗಳನ್ನು ಸೀಮಿತಗೊಳಿಸಲಾಗಿತ್ತು. ಈ ಹೊಸ ಮತಬ್ಯಾಂಕ್ ರಾಜಕೀಯ ಬಿಜೆಪಿಗೆ ಅಭೂತಪೂರ್ವ ಗೆಲುವನ್ನು ತಂದುಕೊಟ್ಟಿತು. ಆ ಮೂಲಕ ಪ್ರಸಕ್ತ ಲೋಕಸಭೆಯಲ್ಲಿ 303 ಸ್ಥಾನಗಳನ್ನು ಗಳಿಸುವ ಮೂಲಕ 1984ರ ಎರಡು ಸ್ಥಾನದಿಂದ 303ಕ್ಕೆ ಜಿಗಿಯಿತು. ದೇಶದಲ್ಲಿ ಜನರು ಜಾತಿ ಗೋಡೆಯನ್ನು ಒಡೆದು ಮನುವಾದಿ ಬಿಜೆಪಿ ಪಕ್ಷಕ್ಕೆ ಮತ ಹಾಕಿರುವುದು ದೇಶ ಕಂಡ ಬಹುದೊಡ್ಡ ಬೆಳವಣಿಗೆಯಾಗಿತ್ತು.

ಇದೇನೂ ಅಸಂಗತತೆಯಾಗಿರಲಿಲ್ಲ ಬದಲಿಗೆ ಭಾರತೀಯ ರಾಜಕೀಯದಲ್ಲಿ ಒಂದು ಬೃಹತ್ ಬದಲಾವಣೆಯಾಗಿತ್ತು. 1990ರಲ್ಲಿ ಬಿಜೆಪಿ ಎಣಿಕೆಯ ಮಟ್ಟಕ್ಕೇರಿ, 2019ರಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿ ಕಂಡುಕೇಳರಿಯದ ಗೆಲುವು ಸಾಧಿಸಿತು. 2019ರ ಚುನಾವಣಾ ಫಲಿತಂಶದ ಪ್ರಕಾರ, ಕಾಂಗ್ರೆಸ್, ಎಡ ಮತ್ತು ಸಮಾಜವಾದಿ ಪಕ್ಷಗಳು ಸಂಸತ್‌ನಲ್ಲಿ ಸೀಮಿತಗೊಳಿಸಲ್ಪಟ್ಟವು. ಇದು ಯಾಕಾಯಿತು ಎಂದು ತಿಳಿಯಲು ಒಂದಷ್ಟು ಸಿಂಹಾವಲೋಕನ ಮಾಡುವ ಅಗತ್ಯವಿದೆ.

ಯಾಕೆಂದರೆ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಹಾಗೂ ಎಡ ಪಕ್ಷಗಳು ಜನರ ನಿರೀಕ್ಷೆಗಳನ್ನು ಅರಿಯುವ ಬದಲು ತಮ್ಮದೇ ಜಾತಿ,ವರ್ಗ ಮತ್ತು ಇಂತಹ ಇತರ ವಿಷಯಗಳನ್ನಾಧರಿಸಿದ ಅಭಿಯಾನವನ್ನು ನಡೆಸಿದವು. ಮಂಡಲ ನಾಯಕರು ಮತ್ತು ಕಾಂಗ್ರೆಸ್ ತಮಗೆ ಇಂತಹ ಚುನಾವಣೆಗಳಲ್ಲಿ ರಾಜಕೀಯ ಲಾಭವನ್ನು ತಂದುಕೊಟ್ಟಂತಹ ರಾಜಕೀಯದ ಅತಿಶಯೋಕ್ತಿ ಯೋಚನೆಗಳ ವೈಭವದಲ್ಲೇ ಮುಂದುವರಿದವು. ಇದರ ಫಲಿತಾಂಶವಾಗಿ, ದುರ್ಬಲ ವಿಭಾಗದ ಸಬಲೀಕರಣ, ಜಾತ್ಯತೀತವಾದ ಮತ್ತು ಸಾಮಾಜಿಕ ಏಕತೆ ಆಧಾರದ ನೈತಿಕರಾಜಕೀಯ ಈಗಲೂ ಜನರಿಗೆ ಇಷ್ಟವಾಗುತ್ತದೆ ಮತ್ತು ಹಾಗಾಗಿ ನಾವೇ ಅಜೇಯರು ಎಂಬ ಸಂತ್ರಪ್ತ ಭಾವನೆಯನ್ನು ಹೊಂದಿದವು.

ಆದರೆ ಅದು ಹಾಗಾಗಲಿಲ್ಲ. ಜನರು ಬಹುಶಃ ಕಾಂಗ್ರೆಸ್‌ನ ಅದೇ ಹಳೆಯ ಹೇಳಿಕೆಗಳು ಮತ್ತು ಮಂಡಲ ಮಾದರಿಯ ಸಮಾಜವಾದಿ ಪಕ್ಷಗಳಿಂದ ಜಿಗುಪ್ಸೆಗೊಂಡರು ಎಂದು ಕಾಣುತ್ತದೆ. ಅದರ ಪರಿಣಾಮವಾಗಿ ಮತದಾರರು ಒತ್ತಾಯಪೂರ್ವಕವಾಗಿ ಬೇರೆ ಆಯ್ಕೆಯಿಲ್ಲದೆ ಬಿಜೆಪಿಯನ್ನು ಒಪ್ಪಿಕೊಳ್ಳಬೇಕಾಗಿ ಬಂತು.

ಬಿಜೆಪಿಯ ನಿಷ್ಠಾವಂತ ತಂಡ ಮತ್ತು ಸೈದ್ಧಾಂತಿಕ ಅಭಿಯಾನ ಜನರಲ್ಲಿ ನಾವು ನಿಮ್ಮ ಎಲ್ಲ ನಿರೀಕ್ಷೆಗಳನ್ನು ಈಡೇರಿಸ್ತುತೇವೆ ಎಂಬ ಭರವಸೆಯನ್ನು ಮೂಡಿಸಿತು. ವಿಪಕ್ಷಗಳ ವೈಫಲ್ಯಗಳನ್ನು ಲೆಕ್ಕ ಹಾಕುತ್ತಲೇ ಖಂಡಿಸಿದ ಬಿಜೆಪಿ ಜೊತೆಗೆ ಧಾರ್ಮಿಕ ಮತ್ತು ರಾಷ್ಟ್ರವಾದಿ ಅಭಿಯಾನವನ್ನು ನಡೆಸಿತು.

ಮತ್ತೊಂದೆಡೆ ವಿರೋಧ ಪಕ್ಷಗಳು ಬಿಜೆಪಿ ಅಭಿಯಾನವನ್ನು ವಿಫಲಗೊಳಿಸುವಷ್ಟು ಪರಿಣಾಮಕಾರಿ ಅಸ್ತ್ರವನ್ನು ಬಳಸುವಲ್ಲಿ ವಿಫಲವಾದವು. ಅವಕಾಶವಾದಿ ಮೈತ್ರಿಯನ್ನು ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೆ ನಾವು ಅದೇ ಹಳೆಯ ಘೋಷಣೆಗಳ ಆಧಾರದಲ್ಲಿ ಚುನಾವಣೆ ಗೆಲ್ಲಬಹುದು ಎನ್ನುವ ಯೋಚನೆಯಲ್ಲೇ ಅವುಗಳು ಸ್ವಯಂ ತೃಪ್ತಿ ಪಟ್ಟುಕೊಂಡವು. ಅದಕ್ಕೆ ಅವರಿಗೆ ತಕ್ಕ ಶಿಕ್ಷೆಯೇ ಆಯಿತು. ಅವರ ಅತಿಬಳಸಲ್ಪಟ್ಟ ಉಪಾಯಗಳು ಭಾರತೀಯ ಮತದಾರರನ್ನು ಎಳೆಯುವಲ್ಲಿ ಸಂಪೂರ್ಣ ವಿಫಲವಾದವು.

2019ರ ಜನಾದೇಶವನ್ನು ಬಹುಸಂಖ್ಯಾತವಾದದ ಗೆಲುವು ಎಂದು ಹೇಳುವುದು ಸಮಂಜಸವಲ್ಲ. ವಾಸ್ತವದಲ್ಲಿ, ಇದು ತಮ್ಮ ಮುಂದೆ ಲಭ್ಯವಿದ್ದ ರಾಜಕೀಯ ಆಯ್ಕೆಗಳಲ್ಲಿ ಆಯ್ಕೆ ಮಾಡಿದ ಜನರ ಪ್ರಜ್ಞಾಪೂರ್ವಕ ನಿರ್ಧಾರವಾಗಿತ್ತು. ಈ ಸಂದರ್ಭದಲ್ಲಿ ಕನಸುಗಳ ಉತ್ತಮ ಮಾರಾಟಗಾರರು ಸ್ಪರ್ಧೆಯಲ್ಲಿ ಜಯಿಸಿದ್ದರೆ ಉಳಿದವರು ಅಸಹಾಯಕರಂತೆ ಹಿಂದುಳಿದರು.

ಇದುವೇ ಪ್ರಜಾಪ್ರಭುತ್ವದ ಸೌಂದರ್ಯವಾಗಿದೆ. ಇಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಯಾರೂ ಶಾಶ್ವತ ಬಹುಸಂಖ್ಯಾತರೂ ಅಲ್ಲ ಅಲ್ಪಸಂಖ್ಯಾತರೂ ಅಲ್ಲ. ಜನರಿಗೆ ಕನಸುಗಳನ್ನು ಉತ್ತಮವಾಗಿ ಮಾರುವ ರಾಜಕೀಯ ಪಕ್ಷಗಳು ಗೆಲುವು ಸಾಧಿಸುತ್ತವೆ ಮತ್ತು ಮತದಾರರನ್ನು ತಮ್ಮ ಕನಸುಗಳಿಂದ ಮೋಹಿತಗೊಳಿಸಲು ವಿಫಲವಾದ ಪಕ್ಷಗಳು ಸೋಲುತ್ತವೆ. ಜನರ ಮಧ್ಯೆ ಆಕರ್ಷಣೆಯನ್ನು ಕಳೆದುಕೊಂಡರೆ ಆಡಳಿತರೂಡ ಪಕ್ಷಗಳು ಅಧಿಕಾರವನ್ನು ಕಳೆದುಕೊಳ್ಳುತ್ತವೆ. ಈ ವಿದ್ಯಮಾನ ಪ್ರಜಾಪ್ರಭುತ್ವದ ಪ್ರಮುಖ ಭಾಗವಾಗಿದೆ.

ಹಾಗಾಗಿ 2019ರ ಜನಾದೇಶ ಭಾರತೀಯ ಪ್ರಜಾಪ್ರಭುತ್ವದ ಒಂದು ಹಂತವಾಗಿದೆ. ಜನರು ಬಿಜೆಪಿಯಿಂದ ಹತಾಶೆಗೊಂಡಾಗ ಮತ್ತು ಬೇರೆ ಪಕ್ಷವನ್ನು ಆಯ್ಕೆ ಮಾಡಿದಾಗ ಬದಲಾವಣೆಯ ಸಮಯ ಬರುತ್ತದೆ.

ಈ ಚರ್ಚೆಯಿಂದ ಮೂಡುವ ಇನ್ನೊಂದು ತೀರ್ಮಾನವೇನೆಂದರೆ, ರಾಷ್ಟ್ರೀಯವಾದವನ್ನು ಹಿಂದು ಧರ್ಮದ ಮಿಶ್ರಣದೊಂದಿಗೆ ಮಾರಾಟ ಮಾಡುವುದು 2019ರ ಚುನಾವಣೆಯಲ್ಲಿ ಜನರನ್ನು ಸೆಳೆಯಲು ಯಶಸ್ವಿಯಾದ ಹೊಸ ವಿಷಯವಾಗಿದೆ. ಈ ಕಲ್ಪನೆ ಹಳೆಯದಾಗಿದ್ದರೂ ಅದನ್ನು ಕಟ್ಟಿಕೊಟ್ಟಿರುವ ರೀತಿ ಜನರು ಅವರಿಗೆ ಎರಡನೇ ಅವಕಾಶ ನೀಡುವುದನ್ನು ತಡೆಯಲಾಗದಷ್ಟು ಆಕರ್ಷಣೆಯನ್ನು ಒದಗಿಸಿತ್ತು. ಈ ಸಮಯದಲ್ಲಿ ವಿರೋಧ ಪಕ್ಷಗಳು ದುಪ್ಪಟ್ಟು ಪ್ರಯತ್ನ ನಡೆಸಿ ಜನರ ಕಲ್ಪನೆಗಳನ್ನು ಹಿಡಿಯಲು ತಮ್ಮ ಯೋಜನೆಗಳನ್ನು ರೀಪ್ಯಕೇಜ್ ಮಾಡಬೇಕು. ಈಗ ಅವರ ಬಳಿ ಹಾಗೆ ಮಾಡಲು ಮತ್ತೆ ಐದು ವರ್ಷ ಸಮಯಾವಕಾಶವಿದೆ.

LEAVE A REPLY

Please enter your comment!
Please enter your name here