ಬೆಂಗಳೂರು : ಒಳಚರಂಡಿ ಮಿಶ್ರಿತ ಕಲುಷಿತಗೊಂಡ ಕುಡಿಯುವ ನೀರು ಸೇವಿಸಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಎಚ್ ಬಿಆರ್ ಲೇಔಟ್ ನ ಟೆಲಿಕಾಂ ಬಡಾವಣೆಯಲ್ಲಿ ನಡೆದಿದೆ.
ಕಲುಷಿತಗೊಂಡ ಕುಡಿಯುವ ನೀರು ಸೇವಿಸಿ ಅಸ್ವಸ್ಥರಾದ 20ಕ್ಕೂ ಹೆಚ್ಚು ಮಂದಿಯಲ್ಲಿ ಬಹುತೇಕ ಎಲ್ಲರೂ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು ಬಿಬಿಎಂಪಿ ಜಲಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾವೇರಿ ಕುಡಿಯುವ ನೀರಿಗೆ ಒಳಚರಂಡಿ ನೀರು ಮಿಶ್ರಣವಾಗಿರುವುನ್ನು ತಿಳಿಯದೇ ಅದೇ ನೀರನ್ನು ಕುಡಿದ ಜನರು ವಾಂತಿಭೇದಿಯಾಗಿ ಅಸ್ವಸ್ಥಗೊಂಡಿದ್ದು ಅವರಲ್ಲಿ ತೀವ್ರ ಅಸ್ವಸ್ಥಗೊಂಡ 20ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ.ಅಸ್ವಸ್ಥಗೊಂಡು ಚಿಕಿತ್ಸೆ ಪಡೆದ ಒಬ್ಬರಿಗೆ 5 ದಿನಕ್ಕೆ 50 ಸಾವಿರ ಬಿಲ್ ಮಾಡಲಾಗಿದೆ ಎಂದು ಖಾಸಗಿ ಆಸ್ಪತ್ರೆಯ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.
ಅಸ್ವಸ್ಥವಾಗಿರುವವರು ಕಲುಷಿತ ನೀರು ಸೇವಿಸಿರುವುದು ದೃಢವಾಗಿದೆ. ಪ್ರಾಣಾಪಾಯದಿಂದ ಪಾರಾದವರ ಕುಟುಂಬಸ್ಥರು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಭೇಟಿಯೇ ನೀಡಿಲ್ಲ ಎಂದು ಆರೋಪಿಸಲಾಗಿದೆ.