ಬೆಂಗಳೂರು: ಕಾಂಗ್ರೆಸ್ ಪಕ್ಷದ 20 ಜನ ಶಾಸಕರು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ದೂರವಿರುವ ಹಿಂದುಳಿದ ವರ್ಗದವರನ್ನು ಕರೆತರುವ ಜವಾಬ್ದಾರಿಯನ್ನು ಸಚಿವ ಮುನಿರತ್ನ ಅವರಿಗೆ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಯೋಜಿಸಿದ್ದ ಸಮುದಾಯದ ಜನಪ್ರತಿನಿಧಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಸುಮಾರು 20 ಶಾಸಕರು ಬಿಜೆಪಿಗೆ ಬರಲು ಸಿದ್ಧರಾಗಿದ್ದು, ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ಅನೇಕ ನಾಯಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಬಿಜೆಪಿಯಿಂದ ಯಾವ ಶಾಸಕರು, ಮುಖಂಡರು ಕಾಂಗ್ರೆಸ್ ಗೆ ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ.