ಸಿಎಎ ಜಾರಿಯಾಗಿ 2 ವರ್ಷ: ಈಶಾನ್ಯ ರಾಜ್ಯಗಳಲ್ಲಿ ಕಪ್ಪು ದಿನ ಆಚರಣೆ

Prasthutha|

ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ಶನಿವಾರ ಮತ್ತೆ ಪ್ರತಿಭಟನೆ ನಡೆದಿದೆ.

- Advertisement -


ವಿದ್ಯಾರ್ಥಿಗಳ ಪ್ರಮುಖ ಸಂಘಟನೆಯಾದ ಈಶಾನ್ಯ ವಿದ್ಯಾರ್ಥಿಗಳ ಸಂಘಟನೆ (ಎನ್ ಇಎಸ್ ಒ) ವಿವಾದಾತ್ಮಕ ಕಾಯ್ದೆ ಜಾರಿಯಾಗಿ ಎರಡು ವರ್ಷವಾದ ಹಿನ್ನೆಲೆಯಲ್ಲಿ ಶನಿವಾರ “ಕಪ್ಪು ದಿನ” ವನ್ನು ಆಚರಿಸಿದರೆ, ಅಸ್ಸಾಂನ ರಾಜಕೀಯ ಪಕ್ಷ ಅಸೋಮ್ ಜತಿಯಾ ಪರಿಷತ್ (ಎಜೆಪಿ) ಕಾಯ್ದೆಯ ಪ್ರತಿಗಳನ್ನು ಸುಟ್ಟು ಪ್ರತಿಭಟನೆ ವ್ಯಕ್ತಪಡಿಸಿತು.


ಈಶಾನ್ಯ ವಿದ್ಯಾರ್ಥಿಗಳ ಸಂಘಟನೆ ಸದಸ್ಯರು ಸಾಂಕೇತಿಕ ಪ್ರತಿಭಟನೆ ನಡೆಸಿ, ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಕಪ್ಪು ಧ್ವಜಗಳು ಮತ್ತು ಬ್ಯಾನರ್ ಗಳನ್ನು ಪ್ರದರ್ಶಿಸಿದರು. ಸಿಎಎ ವಿರುದ್ಧ ಹೋರಾಡುತ್ತಲೇ ಇರಿ ಎಂದು ಅದು ಜನರಿಗೆ ಮನವಿ ಮಾಡಿದರು.
” ಈಶಾನ್ಯ ಜನರ ನಿರಂತರ ವಿರೋಧದ ಹೊರತಾಗಿಯೂ 2019, ಡಿಸೆಂಬರ್ 11 ರಂದು, ಒಕ್ಕೂಟ ಸರ್ಕಾರವು ಸಂಸತ್ತಿನಲ್ಲಿ ಕಠಿಣ ಸಿಎಎ ಕಾನೂನನ್ನು ಅಂಗೀಕರಿಸಿತ್ತು” ಎಂದು ಎನ್ ಇ ಎಸ್ ಒ ಆರೋಪಿಸಿದೆ.

- Advertisement -


ಈಶಾನ್ಯ ರಾಜ್ಯಗಳ ಜನರು ಸಿಎಎ ವಿರುದ್ಧ ಇದ್ದಾರೆ ಎಂಬ ಸಂದೇಶವನ್ನು ಕೇಂದ್ರಕ್ಕೆ ಕಳುಹಿಸಲು ವಿದ್ಯಾರ್ಥಿ ಸಂಘಟನೆ ಬಯಸಿದೆ ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಡಿಸೆಂಬರ್ 11 ಈಶಾನ್ಯ ಜನರಿಗೆ ಕಪ್ಪು ದಿನವಾಗಿದೆ, ಏಕೆಂದರೆ ಈ ದಿನದಂದು ಪೌರತ್ವ (ತಿದ್ದುಪಡಿ) ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ ಎಂದು ಎನ್ ಇಎಸ್ ಒ ದ ಸಲಹೆಗಾರ ಸಮುಜ್ಜಲ್ ಭಟ್ಟಾಚಾರ್ಯ ತಿಳಿಸಿದರು.


ಗುವಾಹಟಿಯಲ್ಲಿ ಜಾಥಾ ನಡೆಸುವ ಮೂಲಕ ಸಿಎಎ ವಿರೋಧಿ ಆಂದೋಲನದ ಎರಡನೇ ಹಂತವನ್ನು ಪ್ರಾರಂಭಿಸಿರುವುದಾಗಿ ಎಜೆಪಿ ಹೇಳಿದೆ. ಪ್ರತಿಭಟನಕಾರರು ಸಿಎಎ ಪ್ರತಿಗಳನ್ನು ಸುಟ್ಟು ಹಾಕಿ ಕಪ್ಪು ಧ್ವಜಗಳನ್ನು ಪ್ರದರ್ಶಿಸಿ ಸಿಎಎ ರದ್ದುಗೊಳಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.



Join Whatsapp