ಬೆಂಗಳೂರು: ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಸಜೀವ ದಹನಗೊಂಡಿರುವ ದಾರುಣ ಘಟನೆ ನಗರದ ಮಾಗಡಿ ರಸ್ತೆಯ ಕಾರ್ಖಾನೆಯೊಂದರಲ್ಲಿ ನಡೆದಿದೆ.
ಮಾಗಡಿ ರಸ್ತೆಯಲ್ಲಿರುವ ಅಂಜನ್ ಚಿತ್ರಮಂದಿರ ಬಳಿ ಇರುವ ಎಂ.ಎಂ. ಫುಡ್ ಫ್ಯಾಕ್ಟರಿಯಲ್ಲಿ ಇಂದು ಮಧ್ಯಾಹ್ನ 1.40ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ದುರಂತದ ವೇಳೆ ಒಟ್ಟು ಏಳು ಮಂದಿ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು ಎಂದು ತಿಳಿದುಬಂದಿದೆ. ಬೇಕರಿಗೆ ಬೇಕಾದ ಸಿಹಿ ತಿನಿಸುಗಳನ್ನು ಸಿದ್ಧಪಡಿಸುತ್ತಿದ್ದಾಗ ಬಾಯ್ಲರ್ ಸ್ಫೋಟಗೊಂಡಿದೆ. ಸ್ಫೋಟದಲ್ಲಿ ಇನ್ನು ಮೂವರಿಗೆ ಗಂಭೀರವಾಗಿ ಸುಟ್ಟು ಗಾಯಗಳಾಗಿದ್ದು ಅವರನ್ನು ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂರು ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಸ್ಫೋಟದಲ್ಲಿ ಫ್ಯಾಕ್ಟರಿ ಪಕ್ಕದ ಮನೆಯಲ್ಲಿದ್ದ ಇಬ್ಬರಿಗೂ ಸುಟ್ಟು ಗಾಯಗಳಾಗಿವೆ. ಮಾಗಡಿ ರಸ್ತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.