ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸಲು 190 ಕಿ.ಮೀ. ಸುರಂಗ ಮಾರ್ಗವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು 45 ದಿನಗಳಲ್ಲಿ ಸಾರ್ವಜನಿಕ ಟೆಂಡರ್ ಗಳನ್ನು ಆಹ್ವಾನಿಸಲಿದೆ ಎಂದು ತಿಳಿಸಿದರು.
ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ 190 ಕಿ.ಮೀ ಉದ್ದದ ಸುರಂಗ ಮಾರ್ಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಎಂಟು ಕಂಪನಿಗಳು ಅರ್ಹತೆ ಪಡೆದಿವೆ. 45 ದಿನಗಳಲ್ಲಿ ಸಾರ್ವಜನಿಕ ಟೆಂಡರ್‌ಗಳು ನಡೆಯಲಿವೆ ಎಂದರು.
ಸುರಂಗ ರಸ್ತೆ ಹೇಗಿರಬೇಕು, ನಾಲ್ಕು ಅಥವಾ ಆರು ಪಥಗಳಾಗಬೇಕೆ? ಎಲ್ಲಿಂದ ಆರಂಭಿಸಬೇಕು ಮತ್ತು ಎಲ್ಲಿ ಕೊನೆಗೊಳಿಸಬೇಕು ಎಂಬ ಬಗ್ಗೆ ಈ ಕಂಪನಿಗಳು ಅಧ್ಯಯನ ನಡೆಸಿ ವರದಿ ನೀಡಲಿದ್ದು, ನಗರದಾದ್ಯಂತ ವಿಸ್ತರಣೆ ಮಾಡಬೇಕೆ ಎಂಬ ಬಗ್ಗೆಯೂ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.