ಯಮುನಾನಗರ: ಕುಡಿದ ಮದ್ಯದಲ್ಲಿ ವಿಷವಿದ್ದ ಕಾರಣ 19 ಮಂದಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಹರ್ಯಾಣದಲ್ಲಿ ನಡೆದಿದೆ.
ಮದ್ಯ ಸೇವಿಸಿ ತಕ್ಷಣ ಆರು ಮಂದಿ ಸಾವನ್ನಪ್ಪಿದ್ದರು. ಇದೀಗ ಸಾವಿನ ಸಂಖ್ಯೆ 19ಕ್ಕೇರಿದೆ.
ಮದ್ಯ ಸೇವಿಸಿದ ಬಳಿಕ ಕೆಲವರಿಗೆ ರಕ್ತ ವಾಂತಿಯಾಗಿದ್ದು, ನಂತರ ಕೆಲವರು ದೃಷ್ಟಿ ಕಳೆದುಕೊಂಡಿದ್ದಾರೆ. ಇದನ್ನು ಗಮನಿಸಿ ಕೆಲವರನ್ನು ತರಾತುರಿಯಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಾರ್ಗ ಮಧ್ಯೆ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಆಸ್ಪತ್ರೆಗೆ ತಲುಪಿದ ಬಳಿಕ ಮೃತಪಟ್ಟಿದ್ದಾರೆ. ನಂತರ ಗ್ರಾಮದಲ್ಲಿ ವಿಷಪೂರಿತ ಮದ್ಯ ಕುಡಿದು ಸಾವನ್ನಪ್ಪಿದ ಇನ್ನೂ ನಾಲ್ವರು ಜನರಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ಅಕ್ಕಪಕ್ಕದ ಗ್ರಾಮಗಳಲ್ಲಿ ಪಂಚಾಯತ್ ಮೂಲಕ ಘೋಷಣೆ ಮಾಡಿದ್ದಾರೆ. ಈಗಾಗಲೇ ವಿಷಪೂರಿತ ಮದ್ಯವನ್ನು ಖರೀದಿಸಿದ ಜನರಿಗೆ ಮದ್ಯಪಾನ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದು, ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ವಿಚಾರಣೆ ವೇಳೆ ಇನ್ನೂ ಕೆಲವರ ಹೆಸರುಗಳು ಬೆಳಕಿಗೆ ಬಂದಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಯಮುನಾನಗರ ಹೆಚ್ಚುವರಿ
ಪೊಲೀಸ್ ವರಿಷ್ಠಾಧಿಕಾರಿ ಹಿಮಾದ್ರಿ ಕೌಶಿಕ್ ತಿಳಿಸಿದ್ದಾರೆ.