ನವದೆಹಲಿ: ರಾಮನವಮಿ ಸಂದರ್ಭದಲ್ಲಿ JNU ಹಾಸ್ಟೆಲ್ ನಲ್ಲಿ ಮಾಂಸಾಹಾರ ನೀಡಿದ್ದಾರೆಂದು ಆರೋಪಿಸಿ ಗದ್ದಲವೆಬ್ಬಿಸಿದ ಬಳಿಕ ಉಂಟಾದ ಘರ್ಷಣೆಯಲ್ಲಿ 16 ಮಂದಿ ಗಾಯಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಉಭಯ ತಂಡಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘ JNUSU ಮತ್ತು ABVP ನಡುವೆ ಏರ್ಪಟ್ಟ ಘರ್ಷಣೆಯಲ್ಲಿ ಎರಡು ತಂಡಗಳ ಸುಮಾರು 16 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
JNUSU, SFI, DSF ಮತ್ತು AISA ಸದಸ್ಯರು ABVP ವಿದ್ಯಾರ್ಥಿಗಳ ವಿರುದ್ಧ ನೀಡಿದ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 323, 341, 509, 506, 34 ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಬಿವಿಪಿ ಸದಸ್ಯರು ಕೂಡ ದೂರು ನೀಡುವುದಾಗಿ ತಿಳಿಸಿರುವುದಾಗಿ ಎಂದು ಉಪ ಪೊಲೀಸ್ ಆಯುಕ್ತ (ನೈಋತ್ಯ) ಮನೋಜ್ ಸಿ ತಿಳಿಸಿದ್ದಾರೆ.
ಹಾಸ್ಟೆಲ್ ಮೆಸ್ ನಲ್ಲಿ ವಿದ್ಯಾರ್ಥಿಗಳನ್ನು ಮಾಂಸಾಹಾರ ಸೇವಿಸದಂತೆ ABVP ಸದಸ್ಯರು ತಡೆದು ಹಲ್ಲೆ ನಡೆಸಿದ ಪರಿಣಾಮ ಸ್ಥಳದಲ್ಲಿ ಘರ್ಷಣೆ ಉಂಟಾಯಿತು ಎಂದು JNUSU ಆರೋಪಿಸಿದೆ. ಆದಾಗ್ಯೂ ABVP ಈ ಆರೋಪವನ್ನು ನಿರಾಕರಿಸಿದೆ, ರಾಮನವಮಿಯಂದು ಹಾಸ್ಟೆಲ್ ನಲ್ಲಿ ಆಯೋಜಿಸಲಾದ ಪೂಜೆ ಕಾರ್ಯಕ್ರಮಕ್ಕೆ “ಎಡಪಂಥೀಯರು” ಅಡ್ಡಿಪಡಿಸಿದರು ಎಂದು ಆರೋಪಿಸಿದೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿ ವಿದ್ಯಾರ್ಥಿಗಳು ಕಳೆದ ರಾತ್ರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದರು.