ನವದೆಹಲಿ: ಉತ್ತರಾಖಂಡದಲ್ಲಿ ಸತತ ಮೂರನೇ ದಿನವೂ ಸುರಿಯುತ್ತಿರುವ ಧಾರಾಕಾರ ಮಳೆಗೆ 16 ಮಂದಿ ಅಸುನೀಗಿದ್ದಾರೆ.
ಮಾತ್ರವಲ್ಲದೆ ಭೀಕರ ಪ್ರವಾಹ ಉಂಟಾಗಿದ್ದು, ಹಲವು ಕಟ್ಟಡಗಳು ಕುಸಿದಿವೆ. ಈ ಅವಶೇಷಗಳಡಿ ಅನೇಕ ಮಂದಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ತಲೆದೋರಿರುವ ಭೀಕರ ಪ್ರವಾಹ ಪರಿಸ್ಥಿತಿಯನ್ನು ಸರ್ಕಾರ ಅವಲೋಕಿಸುತ್ತಿದೆ. ಉತ್ತರಾಖಂಡ ಪ್ರವಾಹಕ್ಕೆ ಅನೇಕ ಮನೆಗಳು, ಸೇತುವೆಗಳು ಭಾಗಶಃ ಹಾನಿಗೀಡಾಗಿವೆ ಮತು ಇದುವರೆಗೆ 16 ಮಂದಿ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಜನರ ರಕ್ಷಣೆಗಾಗಿ ಸೇನೆಯ ಮೂರು ಹೆಲಿಕಾಪ್ಟರ್ ಗಳನ್ನು ನಿಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಶಿಕ್ಷಣ ಸಚಿವ ಧನ್ ಸಿಂಗ್ ರಾವತ್ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಮುಖ್ಯಮಂತ್ರಿಗಳು ಸುದ್ದಿಗಾರದೊಂದಿಗೆ ಮಾತನಾಡಿದರು. ಈ ವೇಳೆ ಭೀಕರ ಪ್ರವಾಹದಿಂದಾಗಿ ರೈತರ ಬೆಳೆಗಳು ಮತ್ತು ಹೊಲಗಳಿಗೆ ಅಪಾರ ಹಾನಿಯಾಗಿದೆ ಎಂದು ಅವರು ತಿಳಿಸಿದರು.
ಪ್ರಸಕ್ತ ಉತ್ತರಾಖಂಡದ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಸಮಾಲೋಚನೆ ನಡೆಸಿರುವುದಾಗಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದರು.
ಉತ್ತರಾಖಂಡದಲ್ಲಿ ಉಂಟಾದ ಭೂಕುಸಿತಕ್ಕೆ ಸುಂದರ ತಾಣವಾದ ನೈನಿತಾಲ್ ಅನ್ನು ಕಡಿತಗೊಳಿಸಲಾಗಿದೆ. ಮಾತ್ರವಲ್ಲ ಕಲದುಂಗಿ, ಹಲ್ದ್ವಾನಿ ಮತ್ತು ಭವಾಲಿ ಪ್ರದೇಶವನ್ನು ಸಂಪರ್ಕಿಸುವ ರಸ್ತೆಗಳನ್ನು ಭೂಕುಸಿತದಿಂದಾದಿ ಮುಚ್ಚಲಾಗಿದೆ.
ಉತ್ತರಾಖಂಡ ಭೀಕರ ಪ್ರವಾಹಕ್ಕೆ ರಾಜ್ಯ ತತ್ತರಿಸಿದ್ದು, ಭಯಾನಕ ಪರಿಸ್ಥಿತಿಯಿಂದಾಗಿ ಜನರ ಜೀವನ ಅಸ್ತವ್ಯಸ್ತವಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.