Home ಕ್ರೀಡೆ ಭಾರತದ ಗೆಲುವಿಗೆ 145 ರನ್‌ ಗುರಿ; ಕ್ಲೀನ್‌ಸ್ವೀಪ್‌ ತಪ್ಪಿಸಲು ಬಾಂಗ್ಲಾದೇಶ ಹೋರಾಟ

ಭಾರತದ ಗೆಲುವಿಗೆ 145 ರನ್‌ ಗುರಿ; ಕ್ಲೀನ್‌ಸ್ವೀಪ್‌ ತಪ್ಪಿಸಲು ಬಾಂಗ್ಲಾದೇಶ ಹೋರಾಟ

ಮೀರ್‌ಪುರ್‌ನಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್‌ ಪಂದ್ಯ ಕುತೂಹಲ ಘಟ್ಟ ತಲುಪಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ 145 ರನ್‌ಗಳ ಸುಲಭ ಗುರಿ ಪಡೆದಿರುವ ಟೀಮ್‌ ಇಂಡಿಯಾ, 3ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ ನಷ್ಟದಲ್ಲಿ 45 ರನ್‌ಗಳಿಸಿದೆ.

7 ರನ್‌ಗಳಿಂದ 2ನೇ ದಿನದಾಟ ಆರಂಭಿಸಿದ್ದ ಬಾಂಗ್ಲಾದೇಶ, 231 ರನ್‌ ತಲುಪುವಷ್ಟರಲ್ಲಿ ಆಲೌಟ್‌ ಆಯಿತು. ಲಿಟ್ಟನ್‌ ದಾಸ್‌, ಇನ್ನಿಂಗ್ಸ್‌ನ ಏಕೈಕ ಅರ್ಧಶತಕ (73 ರನ್‌) ದಾಖಲಿಸಿದರೆ, ಕೀಪರ್‌ ನೂರುಲ್‌ ಹಸನ್‌ ಮತ್ತು ತಸ್ಕಿನ್‌ ಅಹ್ಮದ್‌ ತಲಾ 31 ರನ್‌ಗಳಿಸಿದರು. ಬೌಲಿಂಗ್‌ನಲ್ಲಿ ಅಕ್ಷರ್‌ ಪಟೇಲ್‌ 3 ಮತ್ತು ಮುಹಮ್ಮದ್‌ ಸಿರಾಜ್‌ ಮತ್ತು ಆರ್‌. ಆಶ್ವಿನ್‌ ತಲಾ 2 ವಿಕೆಟ್‌ ಪಡೆದರು.

145 ರನ್‌ಗಳ ಸುಲಭ ಗುರಿಯೊಂದಿಗೆ ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ, ಸ್ಪಿನ್ನರ್‌ ಮೆಹ್ದಿ ಹಸನ್‌ ಆರಂಭದಲ್ಲೇ ಕಡಿವಾಣ ಹಾಕಿದರು. 3 ರನ್‌ಗಳಿಸುವಷ್ಟರಲ್ಲೇ ನಾಯಕ ಕೆ.ಎಲ್‌. ರಾಹುಲ್‌ ಮತ್ತು 37 ರನ್‌ ತಲುಪಿದಾಗ ಭಾರತದ ಅಗ್ರ ಕ್ರಮಾಂಕದ ನಾಲ್ವರು ಪೆವಿಲಿಯನ್‌ ಸೇರಿದ್ದರು. ಆರಂಭಿಕ ಶುಭ್‌ಮನ್‌ ಗಿಲ್‌ (7 ರನ್‌), ಅನುಭವಿ ಚೇತೇಶ್ವರ್‌ ಪುಜಾರ(6) ಹಾಗೂ ಮಾಜಿ ನಾಯಕ ವಿರಾಟ್‌ ಕೊಹ್ಲಿ ಒಂದು ರನ್‌ ಗಳಿಸಿ ಮೆಹ್ದಿ ಹಸನ್‌ಗೆ ವಿಕೆಟ್‌ ಒಪ್ಪಿಸಿದರು. ರಾಹುಲ್‌ ವಿಕೆಟ್‌ ಶಾಕಿಬ್‌ ಅಲ್‌ ಹಸನ್‌ ಪಾಲಾಯಿತು. ಇನ್ನೂ 2 ದಿನಗಳ ಆಟ ಬಾಕಿ ಉಳಿದಿದ್ದು, ಟೆಸ್ಟ್‌ ಗೆಲುವಿಗೆ ರಾಹುಲ್‌ ಬಳಗ 100 ರನ್‌ ಗಳಿಸಬೇಕಾಗಿದೆ. 26 ರನ್‌ಗಳಿಸಿರುವ ಅಕ್ಷರ್‌ ಪಟೇಲ್‌ ಮತ್ತು ಜಯದೇವ್‌ ಉನಾದ್ಕತ್‌ (3 ರನ್‌) ಭಾನುವಾರ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ.

ಎರಡು ಟೆಸ್ಟ್‌ ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ಭಾರತ ಜಯಭೇರಿ ಬಾರಿಸಿದೆ. ಹೀಗಾಗಿ ಮೀರ್‌ಪುರ್‌ ಟೆಸ್ಟ್‌ ಗೆದ್ದು ಸರಣಿ ಗೆಲ್ಲುವ ತವಕದಲ್ಲಿ ರಾಹುಲ್‌ ಬಳಗವಿದೆ. ಮತ್ತೊಂದೆಡೆ ತವರಿನಲ್ಲಿ ಕ್ಲೀನ್‌ ಸ್ವೀಪ್‌ ತಪ್ಪಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವ ಬಾಂಗ್ಲಾದೇಶ, ಭಾನುವಾರ ಭಾರತವನ್ನು 100 ರನ್‌ ಒಳಗಾಗಿ ಕಟ್ಟಿಹಾಕುವ ವಿಶ್ವಾಸದಲ್ಲಿದೆ.

Join Whatsapp
Exit mobile version