ಮಂಗಳೂರು: ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ನಡೆಯುತ್ತಿರುವ ಕಾನೂನು ನೆರವು ಮತ್ತು ಜಾಗೃತಿ ಅಭಿಯಾನ ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆದಿದೆ.
ಕಳೆದ 14 ದಿನಗಳಲ್ಲಿ 100ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ ಸಾವಿರಾರು ಮಂದಿಗೆ ಕಾನೂನಿನ ಅರಿವು ಮತ್ತು ಜಾಗೃತಿ ಮೂಡಿಸಲಾಗಿದೆ. ಮನೆ ಮನೆ ಭೇಟಿ, ಪಂಚಾಯತ್, ವಾರ್ಡ್ ಮಟ್ಟದಲ್ಲಿ ಸಭೆಗಳು ನಡೆದಿದ್ದು, ಎಲ್ಲೆಡೆ ನಾಗರಿಕರ ಪ್ರತಿಕ್ರಿಯೆ ಆಶಾದಾಯಕವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಜಿ. ಶೋಭಾ ಹೇಳಿದ್ದಾರೆ.
ಭಾನುವಾರ ಮಂಗಳೂರಿನ ಮೇರಿಹಿಲ್ ಮೆಲೇನಿ ರೆಸಿಡೆನ್ಸಿ ಹಾಲ್‌ನಲ್ಲಿ ನಡೆದ 14 ದಿನಗಳ ಅಭಿಯಾನದ ಕೊನೆಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಕಾನೂನು ಸೇವೆಗಳ ಪ್ರಾಧಿಕಾರದ ಜೊತೆಗೆ ಪೃಥ್ವಿ ಸ್ವಯಂವೇಕರು ಚಾರಿಟೆಬಲ್ ಟ್ರಸ್ಟ್, ಲಯನ್ಸ್ ಕ್ಲಬ್ ಈ ಕಾರ್ಯಕ್ರಮ ಆಯೋಜಿಸಿತ್ತು.
ಎಲ್ಲರಿಗೂ ಕಡ್ಡಾಯ ಶಿಕ್ಷಣ, ಆರೋಗ್ಯದ ಹಕ್ಕು ಇದ್ದ ಹಾಗೆಯೇ ಎಲ್ಲರಿಗೂ ಕಾನೂನು ನೆರವು ಲಭಿಸಬೇಕು. ಅದಕ್ಕಾಗಿಯೇ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರ ಅಗತ್ಯವಿರುವ ನಾಗರಿಕರಿಗೆ ಕಾನೂನು ನೆರವು ನೀಡಲು ಸದಾ ಸಿದ್ಧವಾಗಿದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ಯಾನೆಲ್ ವಕೀಲರಾದ ಹರೀಶ್ಚಂದ್ರ ಜನನ ಮರಣ ನೋಂದಣಿ ಬಗ್ಗೆ ವಿವರ ನೀಡಿದರೆ, ಸುಕೇಶ್ ಕುಮಾರ್ ಶೆಟ್ಟಿ ಕೌಟುಂಬಿಕ ದೌರ್ಜನ್ಯಗಳ ತಡೆ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
ಪ್ಯಾನೆಲ್ ವಕೀಲರಾದ ವಾಸುದೇವ ಗೌಡ, ಗೌರಿ, ಪ್ರಶಾಂತ್ ಪೂಜಾರಿ, ಶುಕರಾಜ್ ಕೊಟ್ಟಾರಿ, ಜೀಟಾ ಮರಿಯಾ ಡಿಸೋಜ, ರತ್ನ ಕುಂದರ್, ಪ್ರಫುಲ್ಲ ಹಾಗೂ ಜಯಶ್ರೀ ಉಪಸ್ಥಿತರಿದ್ದರು.
ಸ್ಥಳದಲ್ಲೇ ಕಾನೂನು ನೆರವು:
ನಾಗರಿಕರ ಪ್ರತಿಕ್ರಿಯೆಗೆ ಸ್ಪಂದಿಸಿದ ನ್ಯಾಯಾಧೀಶರು
ಅಭಿಯಾನದ ಕೊನೆಯ ಕಾರ್ಯಕ್ರಮದಲ್ಲಿ ನಾಗರಿಕರು ತಮ್ಮ ಅಹವಾಲುಗಳನ್ನು ಮಾನ್ಯ ನ್ಯಾಯಾಧೀಶರ ಮುಂದೆ ನಿವೇದಿಸಿಕೊಂಡರು. ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಖುದ್ದು ನ್ಯಾಯಾಧೀಶರೇ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವ ಭರವಸೆ ನೀಡಿದ್ದು ವಿಶೇಷವಾಗಿತ್ತು.
ಕೌಟುಂಬಿಕ ವಿವಾದ, ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳ ವಿರುದ್ಧ ದೂರು ಮತ್ತು ಕಂದಾಯ ಅಧಿಕಾರಿಗಳ ವಿರುದ್ಧ ದೂರುಗಳು ಕೇಳಿಬಂದಿತ್ತು.
ಈ ಬಗ್ಗೆ ನೊಂದ ವ್ಯಕ್ತಿಗಳ ಜೊತೆಗೆ ವೈಯಕ್ತಿಕವಾಗಿ ಮಾತನಾಡಿದ ನ್ಯಾಯಾಧೀಶರಾದ ಬಿ.ಜಿ. ಶೋಭಾ, ನೊಂದವರಿಗೆ ಸಾಂತ್ವ ನೀಡಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಪರವಾಗಿ ಮಾನ್ಯ ನ್ಯಾಯಾಧೀಶರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.