ಗುವಾಹತಿ: ವಿಷಪೂರಿತ ಕಾಡು ಅಣಬೆ ಸೇವಿಸಿ ಒಂದು ವಾರದಲ್ಲಿ ಮಗು ಸೇರಿದಂತೆ 13 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಅಸ್ಸಾಂನಲ್ಲಿ ನಡೆದಿದೆ.
ಈ ಕಾಡು ಅಣಬೆ ಸೇವಿಸಿದ ಬಳಿಕ ತೀವ್ರ ಅಡ್ಡ ಪರಿಣಾಮಗಳು ಕಂಡುಬಂದಿದ್ದು, ದರ್ಬಾಂಗ್ ಜಿಲ್ಲೆಯ ಅಸ್ಸಾಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರೋಗಿಗಳನ್ನು ದಾಖಲಿಸಲಾಗಿತ್ತು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕಾಡು ಅಣಬೆ ಮತ್ತು ವಿಷಪೂರಿತ ಅಣಬೆ ಸೇವಿಸಿ ಹಲವು ಅಸ್ವಸ್ಥತೆಗಳಿಂದ 39 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಕಳೆದ 8-10 ದಿನಗಳಲ್ಲಿ ಈ ಪೈಕಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಎಎಂಸಿಎಚ್ ಅಧೀಕ್ಷಕ ಡಾ.ಪ್ರಶಾಂತ ದಿಹಿಂಗಿಯಾ ಮಾಹಿತಿ ನೀಡಿದ್ದಾರೆ.
ಈ ಎಲ್ಲ ಸಾವುಗಳು ಲಿವರ್ ಮತ್ತು ಕಿಡ್ನಿ ವೈಫಲದ್ಯದಿಂದ ಸಂಭವಿಸಿವೆ. ಪ್ರಸ್ತುತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಒಬ್ಬ ರೋಗಿ ದಾಖಲಾಗಿದ್ದು, ಇತರ ಆರು ಮಂದಿ ಆಸ್ಪತ್ರೆಯ ಬೇರೆ ವಿಭಾಗಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರ 19 ಮಂದಿಯನ್ನು ಚಿಕಿತ್ಸೆ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಎಲ್ಲ ರೋಗಿಗಳು ತಿನ್ಸುಿಕಿಯಾ, ಚರೈಡಿಯೊ, ಶಿವಸಾಗರ ಮತ್ತು ದರ್ಬಾಂಗ್ ಜಿಲ್ಲೆಯವರಾಗಿದ್ದು, ಇವರು ಚಹಾ ತೋಟಗಳಲ್ಲಿ ಕೆಲಸ ಮಾಡುವ ಸಮುದಾಯದವರಾಗಿದ್ದು, ಬೇರೆ ಬೇರೆ ಕಡೆಗಳಲ್ಲಿ ಕಾಡು ಅಣಬೆ ಸೇವಿಸಿದ್ದರು ಎಂದು ತಿಳಿದು ಬಂದಿದೆ.