Home ಟಾಪ್ ಸುದ್ದಿಗಳು ಕೊಡಗು: ಹೃದಯಾಘಾತದಿಂದ 12 ವರ್ಷದ ಬಾಲಕ‌ ಮೃತ್ಯು

ಕೊಡಗು: ಹೃದಯಾಘಾತದಿಂದ 12 ವರ್ಷದ ಬಾಲಕ‌ ಮೃತ್ಯು

ಕೊಡಗು: ಮಡಿಕೇರಿ ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮದ 12 ವರ್ಷದ ಬಾಲಕ‌ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಮೃತ ಬಾಲಕನನ್ನು 12 ವರ್ಷದ ಕೀರ್ತನ್ ಎಂದು ಗುರುತಿಸಲಾಗಿದೆ.  

ಕೂಡುಮಂಗಳೂರು ಗ್ರಾಮದ ಮಂಜಾಚಾರಿ ಪುತ್ರ ಕೀರ್ತನ್ ಕೊಪ್ಪ ಭಾರತ ಮಾತಾ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದನು. ಶನಿವಾರ ತಡರಾತ್ರಿ ಮಲಗಿದ ಜಾಗದಿಂದ ಕೀರ್ತನ್ ಎರಡು ಬಾರಿ ಕಿರುಚಿಕೊಂಡಿದ್ದು, ಪೋಷಕರು ಕುಶಾಲನಗರ ಆಸ್ಪತ್ರೆ ಕರೆದೊಯ್ಯುವ ವೇಳೆಗೆ ಬಾಲಕ ಮೃತಪಟ್ಟಿದ್ದಾನೆ.

ಈತ ಓದುತ್ತಿದ್ದ ಅದೇ ಶಾಲೆಯ ಬಸ್ ಚಾಲಕನಾಗಿ ಬಾಲಕನ ತಂದೆ ಕರ್ತವ್ಯ ನಿರ್ವಹಿಸುತ್ತಿದ್ದರು.

ಹೃದಯಾಘಾತಕ್ಕೆ ಕಾರಣ

30ರಷ್ಟು ಹೃದಯಾಘಾತಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಸಂಭವಿಸುತ್ತಿದ್ದು, ಯುವಕರು ತಮ್ಮ ಆಯಸ್ಸಿನ 10 ರಿಂದ 15 ವರ್ಷಗಳ ಮುಂಚೆಯೇ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ ಎಂದು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಕೆಲ ತಿಂಗಳ ಹಿಂದೆ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದರು.

ಯುವಕರಲ್ಲಿ ಹೃದಯಾಘಾತದ ಹೆಚ್ಚಳದ ಅಧ್ಯಯನವನ್ನು ಉಲ್ಲೇಖಿಸಿದ ಡಾ. ಮಂಜುನಾಥ್, ಧೂಮಪಾನಿಗಳಲ್ಲಿ 50 ಪ್ರತಿಶತ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಕುಟುಂಬದ ಇತಿಹಾಸ ಹೊಂದಿರುವ 16 ಪ್ರತಿಶತದಷ್ಟು ಜನರು ಹೃದಯಾಘಾತಕ್ಕೆ ಒಳಗಾಗುತ್ತಾರೆ. ಯಾವುದೇ ಕೆಟ್ಟ ಅಭ್ಯಾಸಗಳು ಮತ್ತು ಕುಟುಂಬದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಲ್ಲದೆ, ಸುಮಾರು 30 ಪ್ರತಿಶತದಷ್ಟು ಜನರು ಕೆಲಸದ ಒತ್ತಡದಿಂದಾಗಿ ಹೃದಯಾಘಾತಕ್ಕೆ ಒಳಗಾಗುತ್ತಾರೆ.

ಒತ್ತಡದಿಂದ ಹೃದಯಾಘಾತಗಳು ಜೀವನದಲ್ಲಿ ಹೆಚ್ಚಿನ ನಿರೀಕ್ಷೆಗಳು ಮತ್ತು ತ್ವರಿತ ಸಮಯದಲ್ಲಿ ಯಶಸ್ಸನ್ನು ಸಾಧಿಸುವ ಕಾರಣದಿಂದಾಗಿರಬಹುದು. ಶೇ.70ರಷ್ಟು ಹೃದಯಾಘಾತಗಳು ಕೆಟ್ಟ ಜೀವನಶೈಲಿಯಿಂದ ಉಂಟಾದರೆ, ಶೇ.30ರಷ್ಟು ಒತ್ತಡದಿಂದ ಉಂಟಾಗಿದೆ ಎಂದು ವಿವರಿಸಿದರು.

ಹೃದಯಾಘಾತಕ್ಕೊಳಗಾದವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ವಿಳಂಬ ಮಾಡದಂತೆ ಡಾ.ಮಂಜುನಾಥ್ ಎಚ್ಚರಿಕೆ ನೀಡಿದರು. 30 ನಿಮಿಷಗಳ ವಿಳಂಬವು ಸಾವಿನ ಸಾಧ್ಯತೆಯನ್ನು 7 ಪ್ರತಿಶತದಷ್ಟು ಹೆಚ್ಚಿಸುತ್ತದೆ.

Join Whatsapp
Exit mobile version