ಧನ್ಬಾದ್: ಜಾರ್ಖಂಡ್ ನ ಧನ್ಬಾದ್ ಜಿಲ್ಲೆಯಲ್ಲಿ ಮನೆಯ ಛಾವಣಿಯ ಮೇಲೆ 11,000 ವೋಲ್ಟ್ ನ ಹೈ ಟೆನ್ಸನ್ ವಿದ್ಯುತ್ ತಂತಿ ಬಿದ್ದ ಹಿನ್ನೆಲೆಯಲ್ಲಿ ಓರ್ವ ಮೃತಪಟ್ಟ ಘಟನೆ ವರದಿಯಾಗಿದೆ.
ರಾತ್ರಿ ಮಲಗಿದ್ದ ವೇಳೆಯಲ್ಲಿ ಈ ದುರ್ಘಟನೆ ನಡೆದಿರುವುದರಿಂದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಧನ್ಬಾದ್ ನ ಪಂಡರಪಾಲ ಪ್ರದೇಶದಲ್ಲಿ ಈ ಘಟನೆ ನಡೆದಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಸುಹೈಲ್ ಅನ್ಸಾರಿ ಎಂದು ಗುರುತಿಸಲಾಗಿದೆ. ಅದೇ ರೀತಿ ಸುಹೈಲ್ ಅವರ ತಾಯಿ ಶಾಮಿದಾ ಖತೂನ್, ಸಹೋದರರಾದ ಶಹನವಾಝ್, ಶಹವಾಝ್ ಎಂಬವರು ಗಂಭಿರವಾಗಿ ಗಾಯಗೊಂಡಿದ್ದು, ನಿರ್ಮಲ್ ಮಹತೋ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆಯೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಹಲವಾರು ಮನೆಗಳ ಮೇಲೆ ಹಾದುಹೋಗಿರುವ ಹೈವೋಲ್ಟೆಜ್ ತಂತಿಯನ್ನು ತೆರವುಗೊಳಿಸುವಂತೆ ಇಲಾಖೆಗೆ ಹಲವು ವರ್ಷಗಳಿಂದ ದೂರು ನೀಡಿದರೂ ಆ ತಂತಿಯನ್ನು ತೆರವುಗೊಳಿಸಲು ಇಲಾಖೆ ಅಸಡ್ಡೆ ತೋರಿದೆಯೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಮಧ್ಯೆ ಬಿಜ್ಲಿ ವಿತ್ರನ್ ನಿಗಮ್ ಲಿಮಿಟೆಡ್ ನ ಹಿರಿಯ ಅಧಿಕಾರಿಯೊಬ್ಬರು ಮನೆಗಳ ಮೇಲೆ ಹೈ ವೋಲ್ಟ್ ವಿದ್ಯುತ್ ತಂತಿಗಳು ಹಾದುಹೋಗಿರುವ ಕಂಬಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿರುವ ನಡುವೆ ಈ ದುರ್ಘಟನೆ ನಡೆದಿರುವುದು ದುರಂತವೆಂದು ತಿಳಿಸಿದ್ದಾರೆ.