ನವದೆಹಲಿ: ಕೇಂದ್ರೀಯ ವಿದ್ಯಾಲಯದ ಶೌಚಾಲಯದೊಳಗೆ 11 ವರ್ಷದ ವಿದ್ಯಾರ್ಥಿನಿಯ ಮೇಲೆ ಇಬ್ಬರು ಹಿರಿಯರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಘಟನೆಯು ಜುಲೈನಲ್ಲಿ ನಡೆದಿದ್ದು, ಈ ವಿಷಯವನ್ನು ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ಎತ್ತಿ ತೋರಿಸಿದ ನಂತರವೇ ಸಂತ್ರಸ್ತೆಯ ಕುಟುಂಬ ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆಯನ್ನು ಗಂಭೀರ ವಿಷಯ ಎಂದು ಬಣ್ಣಿಸಿದ ಡಿಸಿಡಬ್ಲ್ಯೂ, ಈ ವಿಷಯದ ಬಗ್ಗೆ ದೆಹಲಿ ಪೊಲೀಸರು ಮತ್ತು ಶಾಲಾ ಪ್ರಾಂಶುಪಾಲರಿಗೆ ನೋಟಿಸ್ ನೀಡಿದೆ.
ಈ ಘಟನೆಯನ್ನು ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಏಕೆ ವರದಿ ಮಾಡಿಲ್ಲ ಎಂದು ಶಾಲಾ ಅಧಿಕಾರಿಗಳಿಗೆ ಪ್ರಶ್ನಿಸಿದೆ. ಆದರೆ ಕೇಂದ್ರೀಯ ವಿದ್ಯಾಲಯ ಸಂಘಟನೆಯ (ಕೆವಿಎಸ್) ಅಧಿಕಾರಿಗಳು ಈ ಘಟನೆಯನ್ನು ಸಂತ್ರಸ್ತೆ ಅಥವಾ ಆಕೆಯ ಪೋಷಕರು ಶಾಲೆಯ ಪ್ರಾಂಶುಪಾಲರಿಗೆ ವರದಿ ಮಾಡಿಲ್ಲ ಮತ್ತು ಪೊಲೀಸ್ ತನಿಖೆಯ ನಂತರವಷ್ಟೇ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.
ಡಿಸಿಡಬ್ಲ್ಯೂ ಅಧ್ಯಕ್ಷೆ ಸ್ವಾತಿ ಮಲಿವಾಲ್ , ದೆಹಲಿಯ ಶಾಲೆಯೊಂದರಲ್ಲಿ 11 ವರ್ಷದ ವಿದ್ಯಾರ್ಥಿನಿಯೊಂದಿಗೆ ಸಾಮೂಹಿಕ ಅತ್ಯಾಚಾರದ ಗಂಭೀರ ಪ್ರಕರಣವನ್ನು ನಾವು ಸ್ವೀಕರಿಸಿದ್ದೇವೆ. ತನ್ನ ಶಾಲಾ ಶಿಕ್ಷಕರು ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ರಾಜಧಾನಿಯಲ್ಲಿ ಶಾಲೆಗಳು ಸಹ ಮಕ್ಕಳಿಗೆ ಅಸುರಕ್ಷಿತವಾಗಿರುವುದು ತುಂಬಾ ದುರದೃಷ್ಟಕರ ಎಂದು ಹೇಳಿದ್ದಾರೆ.