ಬೆಂಗಳೂರು: 2023ರ ಮೇ ಅಂತ್ಯದವರೆಗೆ ಅಧ್ಯಯನ, ವ್ಯಾಪಾರ ಮತ್ತು ಇತರ ಉದ್ದೇಶಗಳಿಗಾಗಿ ಬೆಂಗಳೂರಿಗೆ ಬಂದಿದ್ದ 678 ವಿದೇಶಿ ಪ್ರಜೆಗಳು ವೀಸಾ ಅವಧಿ ಮುಗಿದ ನಂತರವೂ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ನೀಡಿದ ಮಾಹಿತಿಯನ್ನು ಉಲ್ಲೇಖಿಸಿ ರಾಜ್ಯ ಸರ್ಕಾರ ತಿಳಿಸಿದೆ. ವಿಧಾನ ಪರಿಷತ್ತಿನಲ್ಲಿ ಎಂಎಲ್ಸಿ ಎಂ ನಾಗರಾಜು ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಜಿ ಪರಮೇಶ್ವರ ಅವರು, ವೀಸಾ ಅವಧಿ ಮುಗಿದ ನಂತರವೂ ನಗರದಲ್ಲಿ ಉಳಿದುಕೊಂಡಿದ್ದ ವಿದೇಶಿ ಪ್ರಜೆಗಳ ವಿರುದ್ಧ ಬೆಂಗಳೂರು ನಗರ ಪೊಲೀಸರು ಸುಮಾರು 240 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪ್ರಕರಣಗಳು ಕಳೆದ 30 ತಿಂಗಳುಗಳಲ್ಲಿ (ಜನವರಿ 2021 ಮತ್ತು ಜೂನ್ 2023 ರ ನಡುವೆ) ದಾಖಲಾಗಿವೆ. ಅದೇ ಅವಧಿಯಲ್ಲಿ ರಾಜ್ಯ ಸರ್ಕಾರ 105 ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದರು.
ಕೆಲವು ವಿದೇಶಿ ಪ್ರಜೆಗಳು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಈ ಬಗ್ಗೆ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಸರ್ಕಾರಕ್ಕೆ ತಿಳಿದಿದೆಯೇ ಎಂದು ಎಂಎಲ್ಸಿ ಎಂ ನಾಗರಾಜು ಪ್ರಶ್ನಿಸಿದರು.
ಸರ್ಕಾರವು ಈ ಬಗ್ಗೆ ತಿಳಿದಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಪ್ರಯತ್ನದಲ್ಲಿ, ವಿವಿಧ ಉದ್ದೇಶಗಳಿಗಾಗಿ ಬೆಂಗಳೂರಿಗೆ ಬರುವ ವಿದೇಶಿ ಪ್ರಜೆಗಳ ಮೇಲೆ ತೀವ್ರ ನಿಗಾ ಇರಿಸಿದೆ ಎಂದು ಗೃಹ ಸಚಿವರು ತಿಳಿಸಿದರು.