ಜೈಪುರ: ಗೋ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಶಂಕೆಯಲ್ಲಿ ವ್ಯಕ್ತಿಯೊಬ್ಬರನ್ನು ಗುಂಪು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಚಿತ್ತೋರಗಢ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಮೂರು ಎತ್ತುಗಳನ್ನು ಕೃಷಿ ಉದ್ದೇಶಕ್ಕಾಗಿ ಮಧ್ಯಪ್ರದೇಶಕ್ಕೆ ಕರೆದೊಯ್ಯುತ್ತಿದ್ದಾಗ ಅವರ ಮೇಲೆ ಗುಂಪೊಂದು ತೀವ್ರವಾಗಿ ಥಳಿಸಿತ್ತು. ಪರಿಣಾಮ 25 ವರ್ಷದ ಯುವಕ ಮೃತಪಟ್ಟಿದ್ದು, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
19 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರಲ್ಲಿ 10 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಬಿಗುನ್ ರಾಜೇಂದ್ರ ಜೈನ್ ಹೇಳಿದ್ದಾರೆ. ಆರೋಪಿಗಳೆಲ್ಲರೂ ಸ್ಥಳೀಯ ನಿವಾಸಿಗಳಾಗಿದ್ದು, ಹಸುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಕೆಲವರು ಮಾಹಿತಿ ನೀಡಿದ್ದಾರೆ. ಆಗ ಅವರು ಪಿಕ್ ಅಪ್ ವ್ಯಾನ್ ಅನ್ನು ಬೆನ್ನಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ವಾಹನವನ್ನು ನಿಲ್ಲಿಸಿದಾಗ, ಜನರ ಗುಂಪು ಅವರಿಗೆ ಥಳಿಸಿತು. ಪರಿಣಾಮ ವಾಹನದಲ್ಲಿದ್ದ ಬಾಬು ಭಿಲ್ ಮತ್ತು ಪಿಂಟು ಭಿಲ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬಳಿಕ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಬಾಬು ಭಿಲ್ ಮೃತಪಟ್ಟಿದ್ದರು ಎಂದು ಅವರು ಹೇಳಿದರು.