ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ ಎಪಿಎಲ್ ಕುಟುಂಬಕ್ಕೂ ₹1 ಲಕ್ಷ ಪರಿಹಾರ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ಧನ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಕೋವಿಡ್‌ನಿಂದ ಮೃತಪಟ್ಟ ಎಪಿಎಲ್ ಕುಟುಂಬದವರಿಗೆ ₹1 ಲಕ್ಷ ಪರಿಹಾರ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ’ ಎಂದು ಹೇಳಿದ್ದಾರೆ.
‘ಬಿಪಿಎಲ್ ಮಾತ್ರವಲ್ಲದೇ ಎಪಿಎಲ್ ಕುಟುಂಬಕ್ಕೂ ಕೇಂದ್ರ ಸರ್ಕಾರದಿಂದ ತಲಾ ₹50 ಸಾವಿರ ಪರಿಹಾರ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಬಿಪಿಎಲ್ ಕುಟುಂಬಕ್ಕೆ ಮಾತ್ರ ₹1 ಲಕ್ಷ ಸೇರಿಸಿ ಒಟ್ಟು ₹1.50 ಲಕ್ಷ ಕೊಡುತ್ತಿದೆ. ಈ ಒಂದು ಲಕ್ಷವನ್ನು ಎಪಿಎಲ್ ಕುಟುಂಬಕ್ಕೂ ನೀಡಬೇಕು’ ಎಂಬ ಶಾಸಕ ಬಿ.ಝಡ್. ಜಮೀರ್ ಅಹಮ್ಮದ್ ಅವರ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಹಣಕಾಸಿನ ಸ್ಥಿತಿಗತಿ ನೋಡಿಕೊಂಡು ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.