Home ರಾಷ್ಟ್ರೀಯ ಹೇಳುವುದೊಂದು, ಮಾಡುವುದು ಇನ್ನೊಂದು! | ಇನ್ನೂ ನಿಷೇಧಿತ ಚೀನಾ ಆ್ಯಪ್ ಬಳಸುತ್ತಿರುವ ಬಿಜೆಪಿ!

ಹೇಳುವುದೊಂದು, ಮಾಡುವುದು ಇನ್ನೊಂದು! | ಇನ್ನೂ ನಿಷೇಧಿತ ಚೀನಾ ಆ್ಯಪ್ ಬಳಸುತ್ತಿರುವ ಬಿಜೆಪಿ!

ಮುಂಬೈ : ‘ಹೇಳುವುದು ಒಂದು, ಮಾಡುವುದು ಇನ್ನೊಂದು’ ಎಂಬ ಜನಪ್ರಿಯ ಮಾತು ಬಿಜೆಪಿಗೆ ನೇರ ಅನ್ವಯವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ದೇಶದ ಜನತೆಯನ್ನು ಉದ್ರಿಕ್ತ ಭಾವನೆಯಲ್ಲಿ ಉಳಿಸಿಕೊಳ್ಳಲು ಚೀನಾ ಆ್ಯಪ್ ಗಳನ್ನು ನಿಷೇಧಿಸಬೇಕೆಂದು ಆ ಪಕ್ಷದ ನಾಯಕರು ಒಂದೆಡೆ ಕೂಗಾಡುತ್ತಿದ್ದರೆ, ಇನ್ನೊಂದೆಡೆ ಆ ಪಕ್ಷ ಇನ್ನೂ ಸಾಕಷ್ಟು ಚೀನಾ ಆ್ಯಪ್ ಗಳನ್ನೇ ತಮ್ಮ ಅಧಿಕೃತ ಸಂವಹನಕ್ಕೆ ಬಳಸಿಕೊಳ್ಳುತ್ತಿದೆ. ಈ ಬಗ್ಗೆ ಮಹಾರಾಷ್ಟ್ರ ಕಾಂಗ್ರೆಸ್ ಬೆಳಕು ಚೆಲ್ಲಿದ್ದು, ಬಿಜೆಪಿಯ ಇಂತಹ ಇಬ್ಬಂದಿತನದ ವರ್ತನೆಗೆ ಛೀಮಾರಿ ಹಾಕಿದೆ.

ಜೂನ್ ನಲ್ಲಿ ಕೇಂದ್ರ ಸರಕಾರ 59 ಚೀನಾದ ಆ್ಯಪ್ ಗಳನ್ನು ನಿಷೇಧಿಸಿತ್ತು. ಜೂ.15ರಂದು ಲಡಾಕ್ ನ ಎಲ್ ಎಸಿಯಲ್ಲಿ ಚೀನಾ ಸೇನೆಯೊಂದಿಗೆ ನಡೆದ ತೀವ್ರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಜೂ.29ರಂದು ಚೀನಾದ ಆ್ಯಪ್ ಗಳನ್ನು ಮೋದಿ ಸರಕಾರ ನಿಷೇಧಿಸಿತ್ತು. ಆದರೆ, ಈಗ ಬಿಜೆಪಿ ತನ್ನ ಪಕ್ಷದ ಕಾರ್ಯಕರ್ತರನ್ನು ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿದ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದೆ. ಈ ಪತ್ರಿಕಾ ಹೇಳಿಕೆಯನ್ನು ಸ್ಕ್ಯಾನ್ ಮಾಡಿರುವುದು ನಿಷೇಧಿತ ಚೀನಾ ಆ್ಯಪ್ ನಲ್ಲೇ ಎಂದು ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಆಪಾದಿಸಿದ್ದಾರೆ. ಇದರಿಂದ ಬಿಜೆಪಿಯ ನಕಲಿ ರಾಷ್ಟ್ರೀಯವಾದ ಬಹಿರಂಗವಾಗಿದೆ ಎಂದು ಅವರು ಹೇಳಿದ್ದಾರೆ.

“ತನ್ನದೇ ಸರಕಾರ ನಿಷೇಧಿಸಿರುವ ನಿಷೇಧಿತ ಆ್ಯಪ್ ಅನ್ನು ಬಿಜೆಪಿ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ನಾಚಿಕೆಗೇಡು. ಇದು ಬಿಜೆಪಿಗೆ ಇನ್ನೂ ಚೀನಾದ ಮೇಲೆ ಎಷ್ಟೊಂದು ಪ್ರೀತಿ ಇದೆ ಎಂಬುದನ್ನು ತೋರಿಸುತ್ತದೆ. ಚೀನಾ ಆ್ಯಪ್ ಗಳನ್ನು ನಿಷೇಧಿಸಿರುವ ಮೋದಿ ಸರಕಾರದ ಕ್ರಮ ಕೇವಲ ದೇಶದ ಜನರನ್ನು ತಪ್ಪು ಹಾದಿಗೆಳೆಯುವ ಕ್ರಮ’’ ಎಂದು ಸಾವಂತ್ ಹೇಳಿದ್ದಾರೆ.

ಆದರೆ, ನಾವು ಕಳುಹಿಸುವಾಗ ಅದನ್ನು ನಿಷೇಧಿತ ಆ್ಯಪ್ ಮೂಲಕ ಕಳುಹಿಸಿರಲಿಲ್ಲ. ಮುಂದಿನ ಹಂತದಲ್ಲಿ ಬಳಸಿದವರು ಈ ಆ್ಯಪ್ ಬಳಸಿರಬಹುದು ಎಂದು ಮಹಾರಾಷ್ಟ್ರ ಬಿಜೆಪಿ ವಕ್ತಾರ ಕೇಶವ್ ಉಪಾಧ್ಯಾಯ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Join Whatsapp
Exit mobile version