Home ಟಾಪ್ ಸುದ್ದಿಗಳು ಹಮಾರ ಕುತ್ತ ಹಮಾರ ಗಲ್ಲಿ ಮೇ ಶೇರ್; ಯಡಿಯೂರಪ್ಪ ವಿರುದ್ಧ ಸಿದ್ದು ವ್ಯಂಗ್ಯ

ಹಮಾರ ಕುತ್ತ ಹಮಾರ ಗಲ್ಲಿ ಮೇ ಶೇರ್; ಯಡಿಯೂರಪ್ಪ ವಿರುದ್ಧ ಸಿದ್ದು ವ್ಯಂಗ್ಯ

ಬೆಂಗಳೂರು; ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೇಳಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಧೈರ್ಯವಿಲ್ಲ. ಯಡಿಯೂರಪ್ಪ ಹಮಾರಾ ಕುತ್ತಾ, ಹಮಾರಾ ಗಲ್ಲಿ ಮೇ ಶೇರ್ ( ನಮ್ಮ ನಾಯಿ, ನಮ್ಮ ಬೀದಿಲಿ ಸಿಂಹ) ನಂತೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.


ಬೆಂಗಳೂರಿನ ಶ್ರೀನಗರದಲ್ಲಿಂದು ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, 15ನೇ ಹಣಕಾಸು ಆಯೋಗವೇ ಕರ್ನಾಟಕಕ್ಕೆ 5495 ಕೋಟಿ ರೂ. ವಿಶೇಷ ಅನುದಾನಕ್ಕೆ ಶಿಫಾರಸ್ಸು ಮಾಡಿದೆ. ಆದರೆ ಈ ಅನುದಾನವನ್ನು ರಾಜ್ಯಕ್ಕೆ ತರಲು ಯಡಿಯೂರಪ್ಪನವರಿಂದ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಮುಖ್ಯಮಂತ್ರಿ ಹುದ್ದೆಯಲ್ಲಿ ನಾನಿದ್ದಿದ್ದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಚೇರಿ ಎದುರು ಧರಣಿ ಕುಳಿತುಕೊಳ್ಳುತ್ತಿದ್ದೆ, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರೇ ಹಣಕಾಸು ಮಂತ್ರಿಯಾಗಿದ್ದರೂ ರಾಜ್ಯಕ್ಕೆ ಬರಬೇಕಾದ ಅನುದಾನ ಬರುತ್ತಿಲ್ಲ ಎಂದರು.


ಕರ್ನಾಟಕಕ್ಕೆ ಜಿಎಸ್‌ಟಿಯಲ್ಲಿ ಆಗಿರುವ ನಷ್ಟಕ್ಕೆ ಹಣಕಾಸು ಆಯೋಗ ಹೇಳಿರುವ ವಿಶೇಷ ಅನುದಾನವನ್ನು ಕೇಂದ್ರ ತರಲೇಬೇಕು ಎಂದರು.
ಪ್ರಧಾನಿ ಮೋದಿ ಎದುರು ಹೋಗಿ ಮಾತನಾಡುವ ಧೈರ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇಲ್ಲ. ಕೊರೊನಾ ಸಂದರ್ಭದಲ್ಲಿ ಜನರ ಸಂಕಷ್ಟ ಬಗೆಹರಿಸುವ ಕೆಲಸವನ್ನು ಸರ್ಕಾರ ಮಾಡಬೇಕಿತ್ತು. ಪಡಿತರ ವ್ಯವಸ್ಥೆಯಲ್ಲಿ ಕೇವಲ 2 ಕೆಜಿ ಅಕ್ಕಿ ಕೊಡುತ್ತಿದ್ದಾರೆ. 7 ಕೆಜಿ ಅಕ್ಕಿ ಕೊಟ್ಟಿದ್ದರೆ ಇವರಪ್ಪನ ಮನೆ ಗಂಟೇನೂ ಹೋಗುತ್ತಿತ್ತು. ನಮ್ಮ ಸರ್ಕಾರ ಇದ್ದಿದ್ದರೆ 10 ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತಿದ್ದೆ ಎಂದರು.
ಕೊರೊನಾ ಸಂದರ್ಭದಲ್ಲಿ ಬಡವರಿಗೆ 10 ಸಾವಿರ ರೂ. ಕೊಡಿ ಎಂದು ಒತ್ತಾಯ ಮಾಡಿದ್ದೇ. ಆದರೂ ಸರ್ಕಾರ ಏನೂ ತೀರ್ಮಾನ ಮಾಡಲಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

Join Whatsapp
Exit mobile version