ಹಥ್ರಾಸ್ ಪ್ರಕರಣ: ವಿಚಾರಣೆ ದಿಲ್ಲಿಗೆ ವರ್ಗಾಯಿಸಲು ಸಂತ್ರಸ್ತೆ ಕುಟುಂಬದಿಂದ ಆಗ್ರಹ

Prasthutha|

- Advertisement -

➤‘ಯೋಗಿ ಸರಕಾರ ನೀಡಿದ ಭದ್ರತೆಯಲ್ಲಿ ವಿಶ್ವಾಸವಿಲ್ಲ’

ಹೊಸದಿಲ್ಲಿ: ಹಥ್ರಾಸ್ ನಲ್ಲಿ ನಾಲ್ವರು ಮೆಲ್ಜಾತಿ ಠಾಕೂರ್ ಗಳಿಂದ ಅತ್ಯಾಚಾರ ಮತ್ತು ಹತ್ಯೆಗೊಳಗಾದ 19ರ ಹರೆಯದ ಯುವತಿಯ ಕುಟುಂಬವು ಪ್ರಕರಣದ ತನಿಖೆಯು ಪೂರ್ಣಗೊಂಡ ಬಳಿಕ ವಿಚಾರಣೆಯನ್ನು ದಿಲ್ಲಿಗೆ ವರ್ಗಾಯಿಸಬೇಕೆಂದು ಸುಪ್ರೀಂ ಕೋರ್ಟನ್ನು ಕೋರಿದೆ.

- Advertisement -

ಅಕ್ಟೋಬರ್ 6ರಂದು ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯ ವೇಳೆ  ಮುಖ್ಯನಾಯಮೂರ್ತಿ ಶರದ್ ಎ ಬೊಬ್ಡೆ, ಘಟನೆಯನ್ನು “ಅಸಾಮಾನ್ಯ” ಮತ್ತು “ಆಘಾತಕಾರಿ” ಎಂದು ಕರೆದಿತ್ತು. ಸಾಕ್ಷಿಗಳನ್ನು ರಕ್ಷಿಸುವುದಕ್ಕಾಗಿ ತನ್ನ ಯೋಜನೆಯನ್ನು ತಿಳಿಸಬೇಕು ಮತ್ತು ಸಂತ್ರಸ್ತೆಯ ಕುಟುಂಬವು ವಕೀಲರನ್ನು ಹೊಂದಿದೆಯೇ ಎಂದು ಪ್ರತಿಕ್ರಿಯಿಸಬೇಕೆಂದು ಸುಪ್ರೀಂ ಕೋರ್ಟ್ ಯುಪಿ ಸರಕಾರಕ್ಕೆ ಹೇಳಿತ್ತು.

ವಿಚಾರಣೆಯ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರವರು ಸಂತ್ರಸ್ತೆಯ ಕುಟುಂಬ ಸದಸ್ಯೆಯರಿಗೆ ನೀಡಿದ ಭದ್ರತೆಯ ಕುರಿತು ವಿವರಿಸಿದ್ದರು.

ವಿಚಾರಣೆಯನ್ನು ಅಲಹಾಬಾದ್ ನಿಂದ ದಿಲ್ಲಿಗೆ ವರ್ಗಾಯಿಸಬೇಕೆಂದು ಸಂತ್ರಸ್ತೆ ಪರ ವಕೀಲೆ ಸೀಮಾ ಕುಶ್ವಾಹ ಹೇಳಿದ್ದಾರೆ. ಇನ್ನೋರ್ವ ಹಿರಿಯ ವಕೀಲ ಇಂದಿರಾ ಜೈಸಿಂಗ್,  ಉತ್ತರ ಪ್ರದೇಶದಲ್ಲಿ ಸಂತ್ರಸ್ತೆಯ ಕುಟುಂಬವು ನ್ಯಾಯಯುತ ವಿಚಾರಣೆಯನ್ನು ಪಡೆಯುವುದು ಸಾಧ್ಯವಿಲ್ಲ ಎಂದಿದ್ದಾರೆ.

“ತನಿಖೆಯು ಅರ್ಧಂಬರ್ಧವಾಗಿದೆ ಮತ್ತು ಎಫ್.ಐ.ಆರ್ ನಲ್ಲಿ ಸಂಖ್ಯೆಯನ್ನೂ ಉಲ್ಲೇಖಿಸಲಾಗಿಲ್ಲ. ಸಾಂವಿಧಾನಿಕ ನ್ಯಾಯಾಲಯವೊಂದು ತನಿಖೆಯ ಮೇಲೆ ತೀವ್ರ ನಿಗಾ ಇಡಬೇಕು. ಓರ್ವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನನ್ನು ನೇಮಿಸಬೇಕು. ಉತ್ತರ ಪ್ರದೇಶ ಸರಕಾರ ನೀಡಿದ ರಕ್ಷಣೆಯಿಂದ ನಾವು ತೃಪ್ತರಾಗಿಲ್ಲ. ಕೇಂದ್ರ ಮೀಸಲು ಪಡೆ (ಸಿ.ಆರ್.ಪಿ.ಎಫ್)ಯ ಭದ್ರತೆಯನ್ನು ಒದಗಿಸಬೇಕು” ಎಂದು ಜೈ ಸಿಂಗ್ ಹೇಳಿದ್ದಾರೆ.

Join Whatsapp