Home ಟಾಪ್ ಸುದ್ದಿಗಳು ಸ್ವಂತ ಖರ್ಚಿನಲ್ಲೇ ಆಕ್ಸಿಜನ್ ನೀಡಿ 950 ಜೀವಗಳನ್ನುಳಿಸಿದ ಗೌರವ್ ರಾಯ್!

ಸ್ವಂತ ಖರ್ಚಿನಲ್ಲೇ ಆಕ್ಸಿಜನ್ ನೀಡಿ 950 ಜೀವಗಳನ್ನುಳಿಸಿದ ಗೌರವ್ ರಾಯ್!

►ಕಳೆದ ಬಾರಿ ಆಕ್ಸಿಜನ್ ಇಲ್ಲದೇ ನರಳಿದ್ದ ‘ಆಕ್ಸಿಜನ್ ಮ್ಯಾನ್’ !

ಮುಂಬೈ : ಕೊರೋನಾ ಸೋಂಕಿನಿಂದ ದೇಶವೇ ಕಂಗಾಲಾಗಿದ್ದು, ಆಕ್ಸಿಜನ್ ಕೊರತೆಯಿಂದ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಈ ಮಧ್ಯೆ ಸುಮಾರು 950 ಕ್ಕೂ ಹೆಚ್ಚು ಕೊರೋನಾ ಸೋಂಕಿತರ ಪ್ರಾಣವನ್ನು ರಕ್ಷಿಸಿದ ಗೌರವ್ ರಾಯ್ ಎಂಬ ವ್ಯಕ್ತಿಯ ಮಾನವೀಯ ಕಾರ್ಯ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

‘ಆಕ್ಸಿಜನ್ ಮ್ಯಾನ್’ ಎಂದು ಜನಪ್ರಿಯವಾಗಿರುವ ಗೌರವ್ ರಾಯ್, ಇದುವರೆಗೆ 950 ಕ್ಕೂ ಹೆಚ್ಚು ಕೊರೋನಾ ಸೋಂಕಿತರ ಪ್ರಾಣವನ್ನು ರಕ್ಷಿಸಿದ್ದಾರೆ. ತನ್ನ ಸಣ್ಣ ವ್ಯಾಗನ್ಆರ್ ಕಾರಿನಲ್ಲಿ ಆಮ್ಲಜನಕ ಸಿಲಿಂಡರ್‌ಗಳನ್ನು ತುಂಬಿಸಿ ಗೌರವ್ ರಾಯ್, ಮುಂಜಾನೆ 5 ಗಂಟೆಗೆ ಹೊರಟು ಮಧ್ಯರಾತ್ರಿ ಬಳಿಕ ಮನೆಗೆ ಮರಳುತ್ತಾರೆ.

ಗೌರವ್ ಈ ಸೇವೆಗೆ ಒಂದು ಪೈಸೆಯನ್ನೂ ವಿಧಿಸದೆ ಕಳೆದ ಒಂದು ವರ್ಷದಿಂದ ಮುಂದುವರಿಸುತ್ತಾ ಬಂದಿದ್ದಾರೆ. ಈ ನಿಸ್ವಾರ್ಥ ಸೇವೆಯಿಂದಾಗಿ ಅವರು ‘ಆಕ್ಸಿಜನ್ ಮ್ಯಾನ್’ಎಂದು ಜನಪ್ರಿಯರಾಗಿದ್ದಾರೆ.

ಗೌರವ್ ರಾಯ್ ಕಳೆದ ಜುಲೈನಲ್ಲಿ ಕೊರೋನಾದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಪಾಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ಕೋವಿಡ್ ವಾರ್ಡ್‌ಗೆ ಕರೆದೊಯ್ದಾಗ ಅವರಿಗೆ ಹಾಸಿಗೆ ಲಭಿಸದೆ ವಾರ್ಡ್‌ನ ಮೆಟ್ಟಿಲಿನ ಪಕ್ಕದಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿತ್ತು. ಉಸಿರಾಟಕ್ಕೆ ತೊಂದರೆಯಿಂದ ನರಳುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಯಾವುದೇ ಆಮ್ಲಜನಕ ಸಿಲಿಂಡರ್‌ಗಳು ದೊರಕಲಿಲ್ಲ. ಹಲವು ಗಂಟೆಗಳ ಪ್ರಯತ್ನದ ಬಳಿಕ ಅವರ ಪತ್ನಿ ಆಕ್ಸಿಜನ್ ಸಿಲಿಂಡರ್ ಖಾಸಗಿಯಾಗಿ ಪಡೆಯಲು ಯಶಸ್ವಿಯಾಗಿದ್ದರು. ಇದು ಗೌರವ್ ರಾಯ್‌ ಬದುಕಿನಲ್ಲಿ ಮಹತ್ವದ ತಿರುವು ನೀಡಿತ್ತು ಎನ್ನಲಾಗಿದೆ.

Join Whatsapp
Exit mobile version