ರಿಯಾಧ್ : ಸೌದಿ ಅರೇಬಿಯಾದಲ್ಲಿ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಖಾಸಗಿ ವಲಯದಲ್ಲಿ ಸೌದೀಕರಣ (ಸೌದಿ ರಾಷ್ಟ್ರೀಕರಣ) ದರ ಹೆಚ್ಚಿದೆ ಎಂಬುದು ಅಂಕಿಅಂಶಗಳಿಂದ ತಿಳಿದುಬಂದಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ನಿಧಿಗೆ ಸಂಯೋಜಿತವಾಗಿರುವ ರಾಷ್ಟ್ರೀಯ ಕಾರ್ಮಿಕ ವೀಕ್ಷಣಾಲಯ(NLO)ದ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಕಳೆದ ವರ್ಷ ಶೇ.20.4ರಷ್ಟಿದ್ದ ರಾಷ್ಟ್ರೀಕರಣ ದರ, ಈ ವರ್ಷ 21.54ಕ್ಕೆ ಏರಿಕೆಯಾಗಿದೆ. ಸೌದಿ ಖಾಸಗಿ ವಲಯದ ಸೌದೀಕರಣ ದರ ನಿಧಾನವಾಗಿ ಏರಿಕೆಯಾಗುತ್ತಿದೆ. ಖಾಸಗಿ ವಲಯದಲ್ಲಿ ಕೆಲಸ ಮಾಡುವ ಸೌದಿ ನಿವಾಸಿಗಳಲ್ಲಿ ಸಾಮಾಜಿಕ ವಿಮೆಗಾಗಿ ಪ್ರಧಾನ ಸಂಸ್ಥೆಯಲ್ಲಿ ನೋಂದಾಯಿಸಿಕೊಂಡವರ ಸಂಖ್ಯೆ 2020ರ ಮೂರನೇ ತ್ರೈಮಾಸಿಕದಲ್ಲಿ 17,58,558 ಎಂದು ತಿಳಿದುಬಂದಿದೆ. 2020ರ ಎರಡನೇ ತ್ರೈಮಾಸಿಕದಲ್ಲಿ 81,430 ಮಂದಿ ನೋಂದಾಯಿಸಿಕೊಂಡಿದ್ದರು.
ರಾಷ್ಟ್ರೀಯ ಕಾರ್ಮಿಕ ವೀಕ್ಷಣಾಲಯ ಸೌದಿಯಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಇತ್ಯರ್ಥ ಮಾಡುವ ನಿಟ್ಟಿನಲ್ಲಿ ತಜ್ಞರು ಮತ್ತು ವಿಶೇಷಜ್ಞರ ನಡುವೆ ಜಾಲವನ್ನು ನಿರ್ವಹಿಸುತ್ತದೆ ಮತ್ತು ಈ ಕುರಿತ ನಿಖರ ಅಂಕಿ ಅಂಶಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ.
ಸೌದೀಕರಣವನ್ನು ಅಧಿಕೃತವಾಗಿ ಸೌದಿ ರಾಷ್ಟ್ರೀಕರಣ ಎನ್ನುತ್ತಾರೆ. ಸೌದಿ ಕಾರ್ಮಿಕ ಸಚಿವಾಲಯ ಈ ನೀತಿಯನ್ನು ಜಾರಿಗೊಳಿಸಿದೆ. ಆ ಪ್ರಕಾರ, ಸೌದಿ ಕಂಪೆನಿಗಳು ಸ್ಥಳೀಯ ನಿವಾಸಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕಾಗುತ್ತದೆ.