Home ಟಾಪ್ ಸುದ್ದಿಗಳು ಸೋಂಕು ಪ್ರಕರಣ ಇಳಿಕೆ ತೋರಿಸಲು ಪರೀಕ್ಷೆ ಪ್ರಮಾಣ ಕಡಿಮೆ ಮಾಡುವುದು ಸರಿಯಲ್ಲ : ಡಿ.ಕೆ.ಶಿ ಆಕ್ರೋಶ

ಸೋಂಕು ಪ್ರಕರಣ ಇಳಿಕೆ ತೋರಿಸಲು ಪರೀಕ್ಷೆ ಪ್ರಮಾಣ ಕಡಿಮೆ ಮಾಡುವುದು ಸರಿಯಲ್ಲ : ಡಿ.ಕೆ.ಶಿ ಆಕ್ರೋಶ

ಬೆಂಗಳೂರು: ‘ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣ ಸಂಖ್ಯೆ ಕಡಿಮೆ ತೋರಿಸಲು ಪರೀಕ್ಷೆ ಪ್ರಮಾಣ ಕಡಿಮೆ ಮಾಡಿರುವುದು ಸರಿಯಲ್ಲ. ಇದು ಸರ್ಕಾರವೇ ಜನರನ್ನು ಹತ್ಯೆ ಮಾಡುವ ನಿರ್ಧಾರ. ಜನರ ಸಾವಿಗೆ ಸರ್ಕಾರವೇ ನೇರ ಕಾರಣವಾಗುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಐಸಿಎಂಆರ್ ವರದಿ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸಬೇಕು ಎಂದು ಹೇಳಿದೆ. ಸರ್ಕಾರ ಶೇ. 50 ರಷ್ಟು ಪರೀಕ್ಷೆ ಕಡಿಮೆ ಮಾಡಲು ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ಪರೀಕ್ಷೆ ಮಾಡಿದಷ್ಟು ಜನ ಜಾಗೃತರಾಗಿರುತ್ತಾರೆ. ಸೋಂಕಿನ ಪ್ರಕರಣ ಹೆಚ್ಚಾಗುತ್ತದೆ ಎಂದು ಪರೀಕ್ಷೆ ಪ್ರಮಾಣ ಕಡಿಮೆ ಮಾಡುವುದು ಸರಿಯಲ್ಲ. ಜನರನ್ನು ಸರ್ಕಾರವೇ ಹತ್ಯೆ ಮಾಡಿದಂತೆ ಆಗುತ್ತದೆ. ಹೀಗಾಗಿ ಸರ್ಕಾರ ಹೆಚ್ಚಿನ ಪರೀಕ್ಷೆ ನಡೆಸಬೇಕು. ಇದರಿಂದ ಸೋಂಕಿತರು ಆರಂಭದಲ್ಲೇ ಗುಣಪಡಿಸಿಕೊಳ್ಳಲು ನೆರವಾಗುತ್ತದೆ. ಡಿಸಿಎಂ ಅಶ್ವಥ್ ನಾರಾಯಣ್ ಅವರು ಜವಾಬ್ದಾರಿ ವಹಿಸಿಕೊಂಡ ನಂತರ ಈ ರೀತಿ ಆದೇಶ ನೀಡಲಾಗಿದೆ ಎಂದು ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್ ಹೇಳಿದ್ದಾರೆ.   

ಸರ್ಕಾರ ಜೀವ ಉಳಿಸಲು ಯಾವ ಕ್ರಮ ಬೇಕಾದರೂ ತೆಗೆದುಕೊಳ್ಳಲಿ. ನಾವು ಸಹಕಾರ ನೀಡುತ್ತೇವೆ. ಆದರೆ ಮಾಡಿದ ತಪ್ಪನ್ನು ಒಪ್ಪಿಕೊಳ್ಳದೇ ನಾವು ಮಾಡಿದ್ದೆ ಸರಿ ಎನ್ನುವುದಾದರೆ ನಾವು ಅದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಸರ್ಕಾರದ ಕಾರ್ಯವೈಖರಿ ಬಗ್ಗೆ ನ್ಯಾಯಾಧೀಶರು ಏನೆಲ್ಲಾ ಹೇಳುತ್ತಿದ್ದಾರೆ, ಮಾಧ್ಯಮಗಳು ಏನು ವರದಿ ಮಾಡುತ್ತಿವೆ, ಜನ ಸಾಮಾನ್ಯರು ಏನು ಮಾತನಾಡುತ್ತಿದ್ದಾರೆ ಎಂಬುದನ್ನು ಸರಕಾರ ಗಮನಿಸಬೇಕು‌ ಎಂದು ಅವರು ಹೇಳಿದ್ದಾರೆ.

ಮಂತ್ರಿಗಳು ಈಗ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಕೆಲಸ ಮಾಡಿ ಎಂದು ನಾನು ಕಳೆದ ತಿಂಗಳ 18 ರಂದೇ ಹೇಳಿದ್ದೆ. ವಿರೋಧ ಪಕ್ಷದವರು ಹೇಳಿದ್ದನ್ನು ಮಾಡಲು ಈ ಸರ್ಕಾರ ಬೇಕಾ? ಇವರ ಕೈಯಲ್ಲಿ ಇದನ್ನು ನಿಭಾಯಿಸಲು ಸಾಧ್ಯವಿಲ್ಲ. ಇವರು ಮನೆಗೆ ಹೋಗಿ, ರಾಜ್ಯಪಾಲರ ಆಡಳಿತ ಬರುವುದೇ ಉತ್ತಮ ಎಂದು ಅವರು ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

Join Whatsapp
Exit mobile version