ಪುದುಚೇರಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ನಾರಾಯಣ ಸ್ವಾಮಿ ಹೇಳಿದ್ದಾರೆ. ಬಹುಮತ ನಷ್ಟವಾಗಿದೆ ಎಂಬುದು ಕೇವಲ ಪ್ರತಿಪಕ್ಷಗಳ ಆರೋಪ ಎಂದು ಅವರು ಹೇಳಿದ್ದಾರೆ.
ಈಗ ಎರಡೂ ಪಕ್ಷಗಳಲ್ಲಿ ತಲಾ 14 ಸ್ಥಾನಗಳಿವೆ. ಮಂತ್ರಿಗಳಾದ ಎ. ನಮಶಿವಾಯಂ, ಮಲ್ಲಡಿ ಕೃಷ್ಣ ರಾವ್, ಶಾಸಕರಾದ ಜೋನ್ ಕುಮಾರ್ ಮತ್ತು ತೀಪೈಂದಾನ್ ರಾಜೀನಾಮೆ ನೀಡಿದಾಗ ಸರ್ಕಾರ ತೀವ್ರ ಸಮಸ್ಯೆಗೆ ಸಿಲುಕಿತ್ತು. ನಮಶಿವಾಯಂ ಮತ್ತು ತೀಪೈಂದಾನ್ ಈಗಾಗಲೇ ಬಿಜೆಪಿಗೆ ಸೇರಿದ್ದಾರೆ. ಅವಿಶ್ವಾಸ ನಿರ್ಣಯಕ್ಕೆ ನಿಲ್ಲದೆ ರಾಜೀನಾಮೆ ನೀಡಿ ಚುನಾವಣೆಯನ್ನು ಎದುರಿಸಲು ಮೊದಲು ಸರಕಾರ ನಿರ್ಧರಿಸಿತ್ತು. ಇದೀಗ ತುರ್ತು ಕ್ಯಾಬಿನೆಟ್ ಸಭೆಯ ನಂತರ ಅಧಿಕಾರದಲ್ಲಿ ಮುಂದುವರಿಯಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ.
ಕ್ಯಾಬಿನೆಟ್ ರಾಜೀನಾಮೆ ನೀಡುತ್ತಿಲ್ಲ ಮತ್ತು ಪ್ರತಿಪಕ್ಷಗಳು ಆರೋಪಿಸಿದಂತೆ ಬಹುಮತ ಕಳೆದುಕೊಂಡಿಲ್ಲ ಎಂದು ತುರ್ತು ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ವಿ.ಎಸ್. ನಾರಾಯಣ ಸ್ವಾಮಿ ಹೇಳಿದ್ದಾರೆ. ತಾವು ಅಧಿಕಾರದಲ್ಲಿ ಉಳಿಯುತ್ತೇವೆ ಮತ್ತು ರಾಜೀನಾಮೆ ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದಾರೆ. 33 ಸದಸ್ಯರ ವಿಧಾನಸಭೆಯಲ್ಲಿ ಮೂವರು ನಾಮನಿರ್ದೇಶಿತ ಸದಸ್ಯರಿದ್ದಾರೆ. ಕಾಂಗ್ರೆಸ್ ಶಾಸಕ ಧನವೇಲು ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಈ ಹಿಂದೆ ಹೊರಹಾಕಲಾಗಿತ್ತು. ಇದರೊಂದಿಗೆ ಆಡಳಿತ ಪಕ್ಷದ ಸದಸ್ಯತ್ವವು 19 ರಿಂದ 14 ಕ್ಕೆ ಇಳಿದಿತ್ತು.