►► ಗೌರಿ ಲಂಕೇಶ್ ರೀತಿ ಹತ್ಯೆಯಾಗ್ತೀಯಾ ಎಂದರೂ ತಲೆಕೆಡಿಸಿಕೊಳ್ಳದೆ ಮುನ್ನುಗ್ಗುತ್ತಿರುವ ಭೋಜ್ ಪುರಿ ಗಾಯಕಿ
ನವದೆಹಲಿ : ‘ಹೀಗೇ ಆಡುತ್ತಿದ್ದರೆ, ನೀನು ಕಷ್ಟಕ್ಕೆ ಸಿಲುಕುತ್ತೀಯಾ’ ಎಂದು ನೇಹಾ ಸಿಂಗ್ ರಾಥೋಡ್ ಗೆ ಸ್ನೇಹಿತರು ಆಗಾಗ್ಗೆ ಹೇಳುತ್ತಿರುತ್ತಾರೆ. 2017ರಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ತಮ್ಮ ಮನೆ ಮುಂದೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ರೀತಿಯಲ್ಲೇ ನಿನ್ನ ಹತ್ಯೆಯಾದೀತು ಎಂದೂ ಕೆಲವರು ಬೆದರಿಸಿದ್ದರು. ಆದರೆ, ಅದ್ಯಾವುದಕ್ಕೂ ಜಗ್ಗದೆ, ಸ್ನೇಹಿತರ ಮಾತುಗಳನ್ನು ಮೆಚ್ಚುಗೆಯ ನುಡಿಗಳೆಂದು ಪರಿಭಾವಿಸಿ, ತನ್ನ ಹಾಡುಗಳ ಮೂಲಕ ಸತ್ಯ, ವಾಸ್ತವದ ಮೇಲೆ ಬೆಳಕು ಚೆಲ್ಲುತ್ತಿರುವ ಭೋಜ್ ಪುರಿ ಗಾಯಕಿ, 23 ವರ್ಷದ ಯುವತಿ ನೇಹಾ ಇದೀಗ ಹಾಡುಗಳ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದಾರೆ.
“ಭಯ ಯಾಕೆ’’ ಎಂದು ಕೇಳುವ ನೇಹಾ, ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡನ್ನೂ ತಮ್ಮ ಹಾಡುಗಳಲ್ಲಿ ಪ್ರಶ್ನಿಸುತ್ತಾರೆ. “ನಮ್ಮ ಪ್ರಜಾಪ್ರಭುತ್ವ ಸರಕಾರವನ್ನು ಪ್ರಶ್ನಿಸುವ ಹಕ್ಕು ನಮಗೆ ನೀಡಿದೆ ಮತ್ತು ನಾನು ಅದನ್ನು ಮಾಡುತ್ತಿರುವೆ ಅಷ್ಟೇ’’ ಎಂದು ಹೇಳುವ ನೇಹಾಳ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿವೆ. ತಾನೇ ರಚಿಸಿ ಹಾಡಿರುವ ಆಕೆಯ ಸಾಕಷ್ಟು ಹಾಡುಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
“ನಮಗೆ ಉದ್ಯೋಗ ನೀಡುತ್ತೀರಾ ಅಥವಾ ನಾಟಕ ಮಾಡುತ್ತಿರುತ್ತೀರಾ ಎಂಬುದನ್ನು ಸ್ಪಷ್ಟವಾಗಿ ಹೇಳಿ. ಅಧಿಕಾರ ನಿಮಗೆ ನಿಮ್ಮಪ್ಪನಿಂದ ಬಂದಿದ್ದಲ್ಲ ಎಂಬುದನ್ನು ನೆನಪಿಸುತ್ತಿದ್ದೇನೆ’’ ಎಂಬರ್ಥದ ಖಡಕ್ ನುಡಿಗಳ ಹಾಡುಗಳನ್ನು ಸಂಯೋಜಿಸಿ ನೇಹಾ ಹಾಡಿದ್ದಾರೆ.
ಬಿಜೆಪಿಯ ‘ಅಚ್ಚೇ ದಿನ್’ ಭರವಸೆ ಬಗ್ಗೆಯೂ ಟೀಕಿಸಿರುವ ನೇಹಾ, “ಅವರು ಒಳ್ಳೆಯ ದಿನಗಳನ್ನು ತರುತ್ತೇವೆ ಎಂದು ಭರವಸೆ ನೀಡಿದರು. ಆದರೆ, ನಮ್ಮ ಹೆಗಲಿಗೆ ಜೋಳಿಗೆ ಬಂದಿದೆ, ಕೈಗೆ ಭಿಕ್ಷಾಪಾತ್ರೆ ಬಂದಿದೆ’’ ಎಂದು ಹಾಡಿದ್ದಾರೆ. ಬಿಹಾರ-ಉತ್ತರ ಪ್ರದೇಶ ಗಡಿಯ ಕುಗ್ರಾಮ ಜಂದಾಹಾದ ನಿವಾಸಿಯಾದ ನೇಹಾ, 2019ರಲ್ಲಿ ತಮ್ಮ ಪದವಿ ಮುಗಿದ ಬಳಿಕ ಇಂತಹ ಹಾಡುಗಳನ್ನು ಸಂಯೋಜಿಸಿ ಹಾಡಲು ಆರಂಭಿಸಿದ್ದಾರೆ. ಒಂದು ವರ್ಷದಲ್ಲಿ ಅವರ ಯೂಟ್ಯೂಬ್ ಚಾನೆಲ್ ‘ಧಾರೊಹರ್’ ಗೆ 90,000ಕ್ಕೂ ಅಧಿಕ ಅಭಿಮಾನಿಗಳಿದ್ದಾರೆ. ಆಕೆಯ ಫೇಸ್ ಬುಕ್, ಟ್ವಿಟರ್ ಪುಟಗಳೂ ಅಷ್ಟೇ ಜನಪ್ರಿಯವಾಗಿವೆ. ಆಕೆಯ ಅಭಿಮಾನಿಗಳಲ್ಲಿ ಸಿನೆಮಾ ನಿರ್ಮಾಪಕರು, ಪತ್ರಕರ್ತರು, ಮಾಜಿ ಅಧಿಕಾರಿಗಳು, ಪ್ರತಿಪಕ್ಷದ ಮುಖಂಡರುಗಳೂ ಇದ್ದಾರೆ.
“ರಾಜಕೀಯ ಮಾಡಬೇಡ, ನೀನು ಹಾಳಾಗಿ ಹೋಗುತ್ತಿಯಾ ಎಂದು ಕೆಲವರು ಹೇಳುತ್ತಾರೆ. ಕೆಲವರು ದೇಶದ್ರೋಹಿ ಎಂದೂ ಕರೆಯುತ್ತಾರೆ. ಆದರೆ, ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು ಅಪರಾಧ ಅಲ್ಲವಲ್ಲ?’’ ಎಂದು ನೇಹಾ ಟ್ರೋಲ್ ಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಾರೆ.
ಉತ್ತರ ಪ್ರದೇಶದ ಕಾನ್ಪುರ್ ನಲ್ಲಿ ಬಿಎಸ್ ಸಿ ಪದವಿ ಪಡೆದಿರುವ ನೇಹಾ, ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ‘ರಾಮರಾಜ್ಯ’ ಪರಿಕಲ್ಪನೆ ವಿರುದ್ಧವೂ ಹಾಡು ರಚಿಸಿದ್ದಾರೆ. “ಇಂದಿನ ರಾಮರಾಜ್ಯದಲ್ಲಿ ಸತ್ಯವನ್ನು ಮುಚ್ಚಿ ಹಾಕಲು ಖಾಕಿಯನ್ನು ಬಳಸಿಕೊಳ್ಳಲಾಯಿತು, ತಾಯಿ ತನ್ನ ಮಗಳ ಮೃತದೇಹ ಕಂಡು ಗೋಳಾಡುತ್ತಿದ್ದಾಳೆ, ಮಗಳನ್ನು ಹೆರುವುದಕ್ಕೆ ಜನರು ಹೆದರುವಂತಾಗಿದೆ’’ ಎಂಬರ್ಥದ ಹಾಡುಗಳನ್ನು ನೇಹ ರಚಿಸಿ, ಹಾಡಿದ್ದಾರೆ.