Home ಟಾಪ್ ಸುದ್ದಿಗಳು ಸಚಿವರ ಕಾರ್ಯವೈಖರಿ ಬಗ್ಗೆ ಬಿಜೆಪಿ ಶಾಸಕನಿಂದಲೇ ವಾಗ್ದಾಳಿ; ಸುಧಾಕರ್ ವಿರುದ್ಧ ರೇಣುಕಾಚಾರ್ಯ ಕಿಡಿ

ಸಚಿವರ ಕಾರ್ಯವೈಖರಿ ಬಗ್ಗೆ ಬಿಜೆಪಿ ಶಾಸಕನಿಂದಲೇ ವಾಗ್ದಾಳಿ; ಸುಧಾಕರ್ ವಿರುದ್ಧ ರೇಣುಕಾಚಾರ್ಯ ಕಿಡಿ

ಮಿನಿಸ್ಟರ್ ಅಂದರೆ ದೇವಲೋಕದಿಂದ ಇಳಿದು ಬಂದವರಾ?  ನಾವೇನು ಬಿಟ್ಟಿ ಬಿದ್ದಿದ್ದೀವಾ? ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸರ್ಕಾರದ ಸಚಿವರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಸಚಿವರು ಮಾತನಾಡಲು ಕೂಡ ಸಿಗುತ್ತಿಲ್ಲ. ಅವರ ಆಪ್ತ ಸಹಾಯಕರು, ಆಪ್ತ ಕಾರ್ಯದರ್ಶಿಗಳು ಕೂಡ ಫೋನೇ ಸ್ವೀಕರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ , ಜೆಡಿಎಸ್ ನಿಂದ ಬಂದ ಎಲ್ಲ ಸಚಿವರು ಈ ರೀತಿ ಮಾಡುತ್ತಿದ್ದಾರೆ ಎಂದು ತಾವು ಹೇಳುವುದಿಲ್ಲ. ಕೆಲವು ಸಚಿವರು ಮಾತ್ರ ನಮ್ಮ ಕೈಗೆ ಸಿಗುತ್ತಿಲ್ಲ. ಹತ್ತಾರು ಬಾರಿ ಅವರನ್ನು ಭೇಟಿ ಆಗಲು ಪ್ರಯತ್ನಿಸಿದ್ದೇನೆ. ಪತ್ರ ಬರೆದಿದ್ದೇನೆ, ಏನೂ ಪ್ರಯೋಜನ ಆಗಿಲ್ಲ ಎಂದು ಕಿಡಿ ಕಾರಿದರು.

ಆರೋಗ್ಯ ಇಲಾಖೆಗೆ ಸಂಬಂಧಿಸಿದ ಹೊನ್ನಾಳಿ ಕ್ಷೇತ್ರದ ಕೆಲಸ ಮಾಡಿಸಿಕೊಡುವಂತೆ ತಾವು ಸಚಿವ ಡಾ. ಸುಧಾಕರ್ ಅವರನ್ನು ಹತ್ತಾರು ಬಾರಿ ಭೇಟಿ ಆಗಿದ್ದೇನೆ, ಪ್ರಯೋಜನ ಆಗಿಲ್ಲ. ಅವರು ಇನ್ನೂ ಇದೇ ರೀತಿ ವರ್ತಿಸಿದರೆ ಸುಧಾಕರ್ ಅವರ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇನೆ ಎಂದು ರೇಣುಕಾಚಾರ್ಯ ಎಚ್ಚರಿಸಿದ್ದಾರೆ.

ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ರಾಜಿ ಆಗುವ ಮಾತೇ ಇಲ್ಲ. ಈಗ ತಮ್ಮ ಕ್ಷೇತ್ರದ ಕೆಲವು ಕೆಲಸ ಆಗಿದೆ. ತಮ್ಮ ಕೆಲಸ ಆದ ಮಾತ್ರಕ್ಕೆ ಸುಮ್ಮನಿರುವುದಿಲ್ಲ. ಅನೇಕ ನಮ್ಮ ಶಾಸಕರು ಈ ಬಗ್ಗೆ ಮಾತನಾಡಲಾಗದೆ ಮೌನವಾಗಿದ್ದಾರೆ. ಅವರ ಕೆಲಸಗಳೂ ಆಗಬೇಕು, ಐದಾರು ಸಚಿವರು ಕೈಗೆ ಸಿಗುತ್ತಿಲ್ಲ. ತಾನು ಮೂರು ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ, ನಾವೇನು ಬಿಟ್ಟಿ ಬಿದ್ದಿದ್ದೀವಾ? ಎಂದು ಸಚಿವ ಸುಧಾಕರ್ ವಿರುದ್ಧ ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

Join Whatsapp
Exit mobile version