ಕೋಯಿಕ್ಕೋಡ್ : ಕೇರಳದ ಕೋಯಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ದುರಂತವಾದರೆ, ರಕ್ಷಣಾ ಕಾರ್ಯ ಹೇಗೆ ನಡೆಯಬೇಕೆಂದು ಅಧಿಕಾರಿಗಳು ಬಹುಷಃ ಎಷ್ಟು ಬಾರಿ ಅಭ್ಯಾಸ ಮಾಡಿದ್ದರೋ ಗೊತ್ತಿಲ್ಲ. ಆದರೆ, ಅಂತದ್ದೊಂದು ನಿಜವಾದ ಘಟನೆ ಎದುರಾಗುತ್ತದೆ ಎಂದು, ಸ್ಥಳೀಯ ನಿವಾಸಿ ಫಝಲ್ ಪುದಿಯಕಾತ್ ಮತ್ತವರ ಜೊತೆಗಿದ್ದವರು ಕನಸು ಮನಸಿನಲ್ಲೂ ಯೋಚಿಸಿರಲಿಕ್ಕಿಲ್ಲ. ಶುಕ್ರವಾರ ರಾತ್ರಿ ವಿಮಾನ ರನ್ ವೇಯಿಂದ ಜಾರಿ ಎರಡು ತುಂಡಾಗಿ ಬಿದ್ದಾಗ, ಸ್ಥಳಕ್ಕೆ ಮೊದಲು ಧಾವಿಸಿದ್ದು 32ರ ಹರೆಯದ ಉದ್ಯಮಿ ಫಝಲ್ ಮತ್ತು ಸ್ಥಳೀಯ ನಿವಾಸಿಗಳು.
ಸ್ಫೋಟದಂತಹ ಶಬ್ದ ಕೇಳಿಸಿದ್ದರಿಂದ ಫಝಲ್ ಮತ್ತು ಕೆಲವರು ಅಲ್ಲಿಗೆ ತೆರಳಿದ್ದರು. “ಎಲ್ಲರೂ ಅಳುವ ಶಬ್ದ ಮಾತ್ರ ನಮಗೆ ಕೇಳುತಿತ್ತು. ಜನರು ರಕ್ತದ ಮಡುವಿನಲ್ಲಿ ಮುಳುಗಿದ್ದರು, ಕೆಲವರಿಗೆ ಗಾಯಗಳಾಗಿದ್ದವು, ಮುರಿತಗಳಾಗಿದ್ದವು, ಕೆಲವರು ಪ್ರಜ್ಞೆ ತಪ್ಪಿದ್ದರು’’ ಎಂದು ಫಝಲ್ ಘಟನೆಯ ಬಗ್ಗೆ ವಿವರಿಸುತ್ತಾರೆ.
ಅಪಘಾತಗೊಂಡ ನಕಲಿ ವಿಮಾನದೊಂದಿಗೆ ವಿಮಾನ ನಿಲ್ದಾಣದ ಸಿಬ್ಬಂದಿ ನಡೆಸುತ್ತಿದ್ದ ಅಣಕು ಕಾರ್ಯಾಚರಣೆ ದೂರದಿಂದ ನೋಡಿದ್ದೆ. ಆದರೆ, ನಿಜದಲ್ಲಿ ಅದಕ್ಕಿಂತ ತೀರಾ ಭಿನ್ನವಾದುದು. ನೀವು ಎಷ್ಟು ತಯಾರಾಗಿದ್ದೀರಿ ಎಂಬುದು ಸಂಪೂರ್ಣ ಭಿನ್ನವಾದುದು, ನಿಜವಾಗಿ ನಮ್ಮ ಸುತ್ತಮುತ್ತ ರಕ್ತದ ಕೋಡಿ ಹರಿದಾಗ, ಸಾವು ಕಣ್ಣು ಮುಂದೆ ಇದ್ದಾಗ, ವಾಸ್ತವ ಸ್ಥಿತಿ ಅರಿವಿಗೆ ಬರುವುದು ಎಂದು ಫಝಲ್ ಹೇಳುತ್ತಾರೆ.
ಎಷ್ಟು ಸಾಧ್ಯವೋ ಅಷ್ಟು ಮಂದಿಯನ್ನು ಬದುಕಿಸಿದ್ದೇವೆ. ಯಾರಿಗಾದರೂ ಕೊರೊನಾ ಇದೆಯೋ, ಇಲ್ಲವೋ ಎಂಬ ಬಗ್ಗೆ ನಾವು ಲೆಕ್ಕವೇ ಹಾಕಲಿಲ್ಲ. ಎಷ್ಟು ಮಂದಿಯನ್ನು ಬದುಕಲು ಸಾಧ್ಯವೋ, ಅಷ್ಟು ಮಂದಿಯನ್ನು ಬದುಕಿಸೋಣ ಎಂಬುದೊಂದೇ ನಮ್ಮ ತಲೆಯಲ್ಲಿ ಓಡುತಿತ್ತು ಎಂದು ಫಝಲ್ ಘಟನೆಯ ಬಗ್ಗೆ ಮೈ ನವಿರೇಳಿಸುವಂತೆ ವಿವರಿಸಿದರು.
ಇಂತಹ ಒಂದು ಆಘಾತದ ನಡುವೆ, ಒಬ್ಬ ವ್ಯಕ್ತಿಯನ್ನು ತಾವು ತಮ್ಮ ಕಾರಿನಲ್ಲಿ ಸ್ಥಳೀಯ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ, ಆ ವ್ಯಕ್ತಿ ದಾರಿಯುದ್ಧಕ್ಕೂ ತನ್ನ ಪತ್ನಿ ಮತ್ತು ಮಗುವಿಗಾಗಿ ಅಳುತ್ತಿದ್ದರು. ಅದನ್ನು ತಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. “ನಾನು ನನ್ನ ಕಾರಿನಲ್ಲಿ ರಕ್ತದ ಕಲೆಗಳಾಗಿವೆಯೋ ಎಂದು ಕೂಡ ನೋಡಿಲ್ಲ. ಹಿಂದಿನ ಸೀಟಿನಲ್ಲಿ ಖಂಡಿತಾ ರಕ್ತದ ಕಲೆಗಳಾಗಿರುತ್ತವೆ’’ ಎಂದು ಅವರು ಹೇಳಿದರು.
ಎರಡು ಬಾರಿ ಭಾರೀ ದೊಡ್ಡ ಸ್ಫೋಟದ ಶಬ್ದ ಕೇಳಿಸಿತು ಎಂದು ಇನ್ನೋರ್ವ ಸ್ಥಳೀಯ ನಿವಾಸಿ, 34ರ ಹರೆಯದ ಜುನೈದ್ ಮುಕ್ಕೂದ್ ಹೇಳುತ್ತಾರೆ. “ಮಳೆ ಬರುತ್ತಿದ್ದುದರಿಂದ ಅದು ಗುಡುಗು ಇರಬಹುದೆಂದು ನಾನು ಭಾವಿಸಿದ್ದೆ. ಆದರೆ, ವಿಮಾನ ಜಾರಿ ಎರಡು ತುಂಡಾಗಿತ್ತು. ಕಾಕ್ ಪಿಟ್ ಸಂಪೂರ್ಣ ಗೋಡೆಯೊಂದಕ್ಕೆ ಬಡಿದಿತ್ತು’’ ಎಂದು ಜುನೈದ್ ವಿವರಿಸಿದರು.
“ನಾವು ಪೈಲಟ್ ರನ್ನು ನೋಡಿದೆವು. ಅವರು ಇನ್ನೂ ಸೀಟಿನಲ್ಲಿ ಸಿಲುಕಿದ್ದರು. ಅವರನ್ನು ರಕ್ಷಿಸಲು ಹೋಗಲು ನಮಗೆ ಅಲ್ಲಿ ಸ್ಥಳಾವಕಾಶವೇ ಇರಲಿಲ್ಲ’’ ಎಂದು ಅವರು ಹೇಳಿದರು. ಮಳೆ ಮತ್ತು ಕತ್ತಲು ಆವರಿಸಿದ್ದುದರಿಂದ, ಜನರ ರಕ್ಷಣೆಗೆ ತಮಗೆ ಇನ್ನಷ್ಟು ಕಷ್ಟವನ್ನು ನೀಡುತಿತ್ತು. ರಕ್ಷಣಾ ಕಾರ್ಯಕ್ಕೆ ಸ್ಥಳೀಯರು ಸಾಕಷ್ಟು ಸಹಕರಿಸಿದರು ಎಂದು ಅವರು ತಿಳಿಸಿದರು.