Home ಕರಾವಳಿ ರೈತರ ಪ್ರತಿಭಟನೆಯ ಹಿಂದೆ ತುಕ್ಡೆ ಗ್ಯಾಂಗ್ ಕೈವಾಡವಿದೆ: ಶೋಭಾ ಕರಂದ್ಲಾಜೆ

ರೈತರ ಪ್ರತಿಭಟನೆಯ ಹಿಂದೆ ತುಕ್ಡೆ ಗ್ಯಾಂಗ್ ಕೈವಾಡವಿದೆ: ಶೋಭಾ ಕರಂದ್ಲಾಜೆ

ಉಡುಪಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಹಿಂದೆ ತುಕ್ಡೆ ಗ್ಯಾಂಗ್ ನ ವ್ಯವಸ್ಥಿತ ಷಡ್ಯಂತ್ರವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜೆಎನ್ ಯುನಲ್ಲಿ ಪಾಕ್ ಪರ ಘೋಷಣೆ ಕೂಗಿ ಬಂಧನಕ್ಕೊಳಗಾದವರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭಯೋತ್ಪಾದನೆ ನಡೆಸಿ ಜೈಲಿನಲ್ಲಿರುವವರ ಬಿಡುಗಡೆಗೆ ದೆಹಲಿಯ ರೈತರ ಪ್ರತಿಭಟನೆಯಲ್ಲಿ ಒತ್ತಾಯಗಳು ಕೇಳಿಬರುತ್ತಿದ್ದು, ಇದರ ಹಿಂದಿನ ಸಂಬಂಧ ಏನು ಎಂದು ಪ್ರಶ್ನಿಸಿದ ಅವರು ರೈತರ ಪ್ರತಿಭಟನೆಯ ಹಿಂದೆ ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ್ದ ತುಕ್ಡೆ ಗ್ಯಾಂಗ್ ನ ಷಡ್ಯಂತ್ರವಿದೆ” ಎಂದು ಆರೋಪಿಸಿದ್ದಾರೆ.

ಪಂಜಾಬ್ ಸರ್ಕಾರ ಮಧ್ಯವರ್ತಿಗಳ ಎಪಿಎಂಸಿ ಲಾಬಿಗೆ ಮಣಿದು, ರೈತರ ಪ್ರತಿಭಟನೆಗೆ ಬೆಂಬಲ ನೀಡುತ್ತಿದೆ. ಪಂಜಾಬ್ ಸರ್ಕಾರ ರೈತರ ಹಿತಕ್ಕೆ ಬಲಿನೀಡಿ ದಲ್ಲಾಳಿಗಳ ಹಿತಕ್ಕೆ ಕಾಯುತ್ತಿದೆ ಎಂದವರು ವಾಗ್ದಾಳಿ ಮಾಡಿದ್ದಾರೆ

ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ, ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳು ಈ ಹಿಂದೆ ಎಪಿಎಂಸಿ ಕಾಯ್ದೆಯ ವಿರುದ್ಧವಾಗಿದ್ದವು. ಈಗ ರಾಜಕೀಯ ಕಾರಣಕ್ಕಾಗಿ ಕೃಷಿ ಕಾಯ್ದೆಯನ್ನು ವಿರೋಧಿಸುತ್ತಿವೆ ಎಂದು ಟೀಕಿಸಿದ್ದಾರೆ.

2023ರಲ್ಲಿ ರೈತರ ಆದಾಯವನ್ನು ದ್ವಿಗುಣ ಮಾಡುವುದೇ ಕೃಷಿ ಕಾಯ್ದೆಯ ಹಿಂದಿನ ಉದ್ದೇಶ. ಕೃಷಿ ಕಾಯ್ದೆಯಲ್ಲಿ ಗುತ್ತಿಗೆ ಆಧಾರಿತ ಕೃಷಿಗೆ ಕಾನೂನಿನ ಮಾನ್ಯತೆ ಸಿಗಲಿದ್ದು, ರೈತರು ಉದ್ಯಮಿಗಳಿಂದ ವಂಚನೆಗೊಳಗಾಗುವುದನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

Join Whatsapp
Exit mobile version