ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಭಾಷಣ ಮಾಡದೆ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಸದನದಿಂದ ಹೊರ ನಡೆದಿರುವ ಘಟನೆ ನಡೆದಿದೆ.
2025 ರ ತಮಿಳುನಾಡು ವಿಧಾನಸಭೆಯ ಮೊದಲ ವಿಧಾನಸಭೆ ಅಧಿವೇಶನ ಇಂದಿನಿಂದ ಆರಂಭವಾಗಿದೆ. ನಿಯಮಗಳ ಪ್ರಕಾರ ರಾಜ್ಯಪಾಲ ಆರ್.ಎನ್.ರವಿ ಅವರ ಭಾಷಣದೊಂದಿಗೆ ವಿಧಾನಸಭೆ ಅಧಿವೇಶನ ಆರಂಭವಾಗಬೇಕಿತ್ತು. ಮಾಧ್ಯಮ ವರದಿಗಳ ಪ್ರಕಾರ, ವಿಧಾನಸಭೆ ಅಧಿವೇಶನದ ಆರಂಭದಲ್ಲಿ ರಾಷ್ಟ್ರಗೀತೆ ಬದಲು ರಾಜ್ಯ ಗೀತೆಯನ್ನು ಹಾಡಲಾಯಿತು.
ರಾಜ್ಯಗೀತೆ ಹಾಡಿದ ಬಳಿಕ ರಾಷ್ಟ್ರಗೀತೆ ಹಾಡುವಂತೆ ಒತ್ತಡ ಕೇಳಿ ಬಂದಿತ್ತು. ಆದರೆ ಅವರ ಬೇಡಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಬೇಸರಗೊಂಡ ರಾಜ್ಯಪಾಲರು ಭಾಷಣವನ್ನೂ ಮಾಡದೆ ಸದನದಿಂದ ಹೊರ ನಡೆದಿದ್ದಾರೆ. ಇಡೀ ವಿವಾದದ ಕುರಿತು ತಮಿಳುನಾಡು ರಾಜಭವನ ಹೇಳಿಕೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೇಳಿಕೆಯಲ್ಲಿ ರಾಜಭವನ, ‘ತಮಿಳುನಾಡು ವಿಧಾನಸಭೆಯಲ್ಲಿ ಮತ್ತೊಮ್ಮೆ ಭಾರತದ ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಅವಮಾನ ಮಾಡಲಾಗಿದೆ. ಸಂವಿಧಾನದಲ್ಲಿ ಮೊದಲ ಮೂಲಭೂತ ಕರ್ತವ್ಯವೆಂದರೆ ರಾಷ್ಟ್ರಗೀತೆಗೆ ಗೌರವ ಕೊಡುವುದು ಎಂದು ಹೇಳಲಾಗಿದೆ.
ಎಲ್ಲಾ ರಾಜ್ಯಗಳ ವಿಧಾನಸಭಾ ಅಧಿವೇಶನದ ಆರಂಭದಲ್ಲಿ ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ. ಇಂದು ರಾಜ್ಯಪಾಲರು ಸದನಕ್ಕೆ ಆಗಮಿಸಿದಾಗ ಕೇವಲ ರಾಜ್ಯಗೀತೆ ಮಾತ್ರ ಹಾಡಲಾಯಿತು. ರಾಷ್ಟ್ರಗೀತೆ ಹಾಡುವ ಬಗ್ಗೆ ರಾಜ್ಯಪಾಲರು ಮಾಡಿರುವ ಮನವಿಯನ್ನು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಸದನದ ಸ್ಪೀಕರ್ ತಿರಸ್ಕರಿಸಿದರು. ಭಾರತದ ಸಂವಿಧಾನಕ್ಕೆ ಮಾಡಿದ ಅವಮಾನದ ಭಾಗವಾಗದೆ ರಾಜ್ಯಪಾಲರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸದನದಿಂದ ನಿರ್ಗಮಿಸಿದರು.