ರಾಮ ಮಂದಿರ ನಿರ್ಮಾಣ ಟ್ರಸ್ಟ್ ಹೆಸರಲ್ಲಿ ಅವ್ಯವಹಾರ : ಮಹಂತ್ ಧರ್ಮದಾಸ್ ಗಂಭೀರ ಆರೋಪ

Prasthutha|

- Advertisement -

ಅಯೋಧ್ಯೆ : ಬಾಬರಿ ಮಸ್ಜಿದ್ ಧ್ವಂಸಗೊಳಿಸಿ ರಾಮ ಮಂದಿರ ನಿರ್ಮಿಸಲು ಮುಂಚೂಣಿಯಲ್ಲಿರುವ ನಿರ್ವಾಣಿ ಅಖಾರದ ಸನ್ಯಾಸಿ ಮಹಂತ್ ಧರ್ಮದಾಸ್ ಅವರು ರಾಮ ಮಂದಿರ ನಿರ್ಮಾಣ ಟ್ರಸ್ಟ್ ವಿರುದ್ಧ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಶ್ರೀ ರಾಮ ಜನ್ಮ ಭೂಮಿ ತೀರ್ಥ ಟ್ರಸ್ಟ್ ವಂಚಕರ ವ್ಯಾಪಾರ ಘಟಕವಾಗಿ ಮಾರ್ಪಟ್ಟು ಅದರ ಮೂಲ ಉದ್ದೇಶಗಳನ್ನು ಮೀರಿ ಟ್ರಸ್ಟ್ ಹೆಸರಿನಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಧರ್ಮದಾಸ್ ಆರೋಪಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ನಂತರ ಸ್ಥಾಪಿಸಲಾದ ಟ್ರಸ್ಟ್ ಗೆ ವೈಷ್ಣವ ಸಮುದಾಯವನ್ನು ಪ್ರತಿನಿಧಿಸುವ ಒಬ್ಬ ವ್ಯಕ್ತಿಯನ್ನೂ ಕೂಡ ನೇಮಕ ಮಾಡಿಲ್ಲ ಎಂದು ಧರ್ಮದಾಸ್ ಆರೋಪಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದಲ್ಲಿ ಹೇಳಲಾದ ನೈಜ ಉದ್ದೇಶಗಳಿಂದ ಮೀರಿ ಟ್ರಸ್ಟ್ ಅವ್ಯವಹಾರಗಳ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಮಹಂತ್ ಧರ್ಮದಾಸ್ ಮಾಧ್ಯಮಗಳಿಗೆ ತಿಳಿಸಿದರು. ಟ್ರಸ್ಟ್ ರಚಿಸುವ ಮೊದಲು ಮತ್ತು ನಂತರ ಜನರು ಮಂದಿರದ ನಿಧಿಗೆ ನೀಡಿದ ದೇಣಿಗೆಗಳ ವಿವರಗಳನ್ನು ಬಿಡುಗಡೆ ಮಾಡಲಿಲ್ಲ. ಟ್ರಸ್ಟ್ ನ ಅಂಕಿ ಅಂಶಗಳಲ್ಲಿ ಸುಮಾರು 8 ರಿಂದ 10 ಕೋಟಿ ರೂ ಮಾಯವಾಗಿದೆ. ಟ್ರಸ್ಟ್ ಹೆಸರಿನಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಮಹಂತ್ ಧರ್ಮದಾಸ್ ಆರೋಪಿಸಿದ್ದಾರೆ. 11 ಲಕ್ಷ ಗ್ರಾಮಗಳಿಂದ ದೇಣಿಗೆ ಸಂಗ್ರಹಿಸಲಾಗಿದೆ. ಭಗವಾನ್ ರಾಮನ ಹೆಸರಿನಲ್ಲಿ ಹಣ ಸಂಗ್ರಹಿಸಲು ನಿಮಗೆ ಆದೇಶಿಸಿದವರು ಯಾರು? ಈಗಾಗಲೇ ದೊಡ್ಡ ಮೊತ್ತದ ದೇಣಿಗೆ ಸಂಗ್ರಹ ಮಾಡಲಾಗಿದೆ. ನೀವು ಇನ್ನೂ ಭಗವಾನ್ ರಾಮನನ್ನು ಭಿಕ್ಷುಕನನ್ನಾಗಿ ಯಾಕೆ ಮಾಡುತ್ತೀರಿ? ಎಂದು ಧರ್ಮದಾಸ್ ಕೇಳಿದ್ದಾರೆ. ರಾಮ ಮಂದಿರದ ನಿರ್ಮಾಣಕ್ಕಾಗಿ ದೇಣಿಗೆ ಪಡೆಯಲು ಸುಮಾರು 11 ಲಕ್ಷ ಜನರನ್ನು ಭೇಟಿ ಮಾಡುವುದಾಗಿ ವಿಎಚ್‌ಪಿ ನೇತೃತ್ವದ ಸನ್ಯಾಸಿ ಸಂಘಟನೆ ನಿನ್ನೆ ತಿಳಿಸಿತ್ತು.

Join Whatsapp