ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಬಲವಂತದ ನಿಧಿ ಸಂಗ್ರಹಣಾ ಅಭಿಯಾನ ನಡೆಯುತ್ತಿದ್ದು, ಇದರಿಂದ ದೇಶದ ಕಾನೂನು – ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ. ಆದ್ದರಿಂದ ತಕ್ಷಣ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತರು, ಗಣ್ಯ ವ್ಯಕ್ತಿಗಳು ಮತ್ತು ಪ್ರಮುಖ ಧಾರ್ಮಿಕ ಸಂಸ್ಥೆಗಳ ಮುಖಂಡರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
“ರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನಿಮ್ಮ ತುರ್ತು ಗಮನವನ್ನು ಸೆಳೆಯಲು ನಾವು ಬಯಸುತ್ತೇವೆ. ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ, ನಿಧಿ ಸಂಗ್ರಹಕಾರರು ಬಲವಂತಪಡಿಸಿ ದುಷ್ಕೃತ್ಯವೆಸಗಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಾಮಾಜಿಕ ಸಾಮರಸ್ಯದ ಧಕ್ಕೆ ತಂದಿದ್ದಾರೆ ಎಂದು ಅನೇಕ ಗಣ್ಯರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹ ಅಭಿಯಾನ ಡಿಸೆಂಬರ್ 20, 2020 ರಂದು ಮಧ್ಯಪ್ರದೇಶ ರಾಜ್ಯದಿಂದ ಪ್ರಾರಂಭವಾಯಿತು, ಇದರ ಪರಿಣಾಮವಾಗಿ ದೊಡ್ಡ ಪ್ರಮಾಣದಲ್ಲಿ ಕೋಮು ಹಿಂಸಾಚಾರ ನಡೆಯಿತು. ಮಧ್ಯಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಅಂದರೆ ಮಾಂಡ್ಸೌರ್, ಚಾಂದನ್ ಖೇಡಿ (ಇಂದೋರ್), ಉಜ್ಜಯಿನಿ ಮತ್ತು ರಾಜ್ ಗರ್ ನಲ್ಲಿ ಹಿಂಸಾಚಾರ ನಡೆದಿದೆ. ಜೀರಪುರ ಮೊಹಲ್ಲಾದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗಳಿಗೆ ಭಾರೀ ಹಾನಿಯಾಗಿದ್ದು, ಅಮಾಯಕರ ಮೇಲೆ ತೀವ್ರ ಹಲ್ಲೆಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಮಾತ್ರವಲ್ಲ ಸಂವಿಧಾನಾತ್ಮಕ ನಿಯಮಗಳನ್ನು ಗಾಳಿಗೆ ತೂರಿ ಕರ್ನಾಟಕದ ಶಿವಮೊಗ್ಗದ ಬೀರನಹಳ್ಳಿಯಲ್ಲಿ ಸಚಿವ ಕೆ.ಗೋಪಾಲಯ್ಯ ಮತ್ತು ಶಾಸಕ ಪ್ರೀತಂ ಗೌಡ ಮತ್ತು ಇತರ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹಿಸಿದ್ದಾರೆ ಎಂದು ಪತ್ರದಲ್ಲಿ ಗಮನ ಸೆಳೆಯಲಾಗಿದೆ.
ಆಲ್ ಇಂಡಿಯಾ ಮುಸ್ಲಿಂ ಮಜ್ಲಿಸ್ ಮುಶಾವರದ ಅಧ್ಯಕ್ಷ ನವೀದ್ ಹಮೀದ್, ಬಿಹಾರದ ಇಮಾರತ್-ಎ ಶರೀಹದ ಮುಖಂಡ ಮೌಲಾನ ವಲಿ ರಹ್ಮಾನಿ, ಇತ್ತಿಹಾದ್-ಎ-ಮಿಲ್ಲತ್ ಕೌನ್ಸಿಲ್ ನ ಅಧ್ಯಕ್ಷ ಮೌಲಾನ ತೌಖೀರ್ ರಝಾ ಖಾನ್, ಜಮಾಅತೆ ಇಸ್ಲಾಮಿ ಹಿಂದ್ ನ ಅಧ್ಯಕ್ಷ ಸಯ್ಯದ್ ಸಾದಾತುಲಾ ಹುಸೈನಿ, ಜಮಾಅತೆ ಅಹ್ಲೆ ಹದೀಸ್ ಮುಖ್ಯಸ್ಥ ಮೌಲಾನ ಅಸ್ಗರ್ ಇಮಾಮ್ ಮೆಹ್ದಿ, ಐಒಎಸ್ ಅಧ್ಯಕ್ಷ ಡಾ.ಮನ್ಸೂರ್ ಆಲಂ, ದೆಹಲಿಯ ಮಾಜಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಡಾ.ಝಫರುಲ್ ಇಸ್ಲಾಂ ಖಾನ್, ಸೌತ್ ಏಷ್ಯಾ ಹ್ಯೂಮನ್ ರೈಟ್ಸ್ ಡಾಕ್ಯುಮೆಂಟೇಷನ್ ಸೆಂಟರ್ ನ ಕಾರ್ಯಕಾರಿ ನಿರ್ದೇಶಕ ರವಿ ನಾಯರ್, ಪ್ರೊ.ರಾಮ್ ಪುನಿಯಾನಿ, ದೆಹಲಿಯ ವಿಶ್ವವಿದ್ಯಾಲಯ ಪ್ರೊ.ಅಪೂರ್ವಾನಂದ, ಎಐಎಂಪಿಎಲ್ ಬಿ ಕಾರ್ಯದರ್ಶಿ ಮೌಲಾನ ಖಾಲಿದ್ ಸೈಫುಲ್ಲಾ ರಹ್ಮಾನಿ, ದೆಹಲಿಯ ಶಿಯಾ ಜಾಮಿಯಾ ಮಸೀದಿಯ ಖತೀಬ್ ಮೌಲಾನ ಮೊಹ್ಸಿನ್ ತಕ್ವಿ, ಜಮೀಯತುಲ್ ಉಲೆಮಾ ಅಧ್ಯಕ್ಷ ಅಬ್ದುಲ್ ರಾಝಿಕ್, ಪಿಯುಸಿಎಲ್ ನ ಕವಿತಾ ಶ್ರೀವಾಸ್ತವ, ಎಫ್ ಡಿಸಿಎ ಪ್ರಧಾನ ಕಾರ್ಯದರ್ಶಿ ಇಂಜಿನಿಯರ್ ಮುಹಮ್ಮದ್ ಸಲೀಂ, ಗುಜರಾತ್ ಆರ್ ಟಿಐ ಕಾರ್ಯಕರ್ತ ದಂಕೇಶ್ ಒಝಾ, ರಾಜಸ್ತಾನ ಸಾಮಾಜಿಕ ಕಾರ್ಯಕರ್ತ ಸವಾಯಿ ಸಿಂಗ್, ಶಿಕ್ಷಣ ತಜ್ಞ ಅಂಬರೀಶ್ ರಾಯ್ ಮುಂತಾದ ಗಣ್ಯರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.