ಬೆಂಗಳೂರು : ರಾಜರಾಜೇಶ್ವರಿ ನಗರ ಉಪಚುನಾವಣೆ ಚಟುವಟಿಕೆಗಳು ಬಿರುಸುಗೊಂಡಿದ್ದು, ಜೆಡಿಎಸ್ ನ ಸುಮಾರು 240 ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಜೆಡಿಎಸ್ ರಾಜರಾಜೇಶ್ವರಿ ಘಟಕಾಧ್ಯಕ್ಷ ಬೆಟ್ಟಸ್ವಾಮಿ ಗೌಡ ಕಾಂಗ್ರೆಸ್ ಸೇರ್ಪೆಡೆಗೊಂಡವರಲ್ಲಿ ಪ್ರಮುಖರಾಗಿದ್ದಾರೆ. ಉಪ ಚುನಾವಣೆಗೆ ಅವರು ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಜೆಡಿಎಸ್ ಮುಖಂಡರು ಪಕ್ಷ ಸೇರ್ಪಡೆಗೊಂಡರು. “ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು 15 ವರ್ಷಗಳಿಂದ ಪ್ರಯತ್ನ ಪಡುತ್ತಿದ್ದೆ, ಆದರೆ ಈಗ ಸಮಯ ಕೂಡಿಬಂದಿದೆ’’ ಎಂದು ಶಿವಕುಮಾರ್ ತಿಳಿಸಿದ್ದಾರೆ. “ರಾಷ್ಟ್ರೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳಲು ಅವರು ಬಯಸಿದ್ದುದರಿಂದ, ಬೇಷರತ್ ಆಗಿ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ’’ ಎಂದು ಶಿವಕುಮಾರ್ ಹೇಳಿದ್ದಾರೆ.
ನ.3ರಂದು ನಡೆಯಲಿರುವ ಉಪಚುನಾವಣೆಗೆ ಜೆಡಿಎಸ್ ಕೃಷ್ಣಮೂರ್ತಿ ವಿ. ಅವರನ್ನು ಕಣಕ್ಕಿಳಿಸಿದೆ. ಕೃಷ್ಣಮೂರ್ತಿ ಅವಿರೋಧವಾಗಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಬೆಟ್ಟಸ್ವಾಮಿ ಗೌಡ ಮತ್ತು ಪಕ್ಷದ ಬೆಂಗಳೂರು ಘಟಕ ಅಧ್ಯಕ್ಷ ಆರ್. ಪ್ರಕಾಶ್ ಹೆಸರೂ ಟಿಕೆಟ್ ಆಕಾಂಕ್ಷಿಗಳ ಅಂತಿಮ ಪಟ್ಟಿಯಲ್ಲಿತ್ತು ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್ ನಿಂದ ಜೆಡಿಎಸ್ ಮಾಜಿ ಮುಖಂಡ ಹನುಮಂತರಾಯಪ್ಪ ಅವರ ಮಗಳು ಕುಸುಮಾ ಅವರನ್ನು ಕಣಕ್ಕಿಳಿಸಿದೆ.