ಚೀನಾ ಗಡಿ ಬಿಕ್ಕಟ್ಟು ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶವನ್ನು ಮೋದಿ ದುರ್ಬಲಗೊಳಿಸಿ ನಾಶಪಡಿಸುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚೀನಾ ಸೈನಿಕರು ನಮ್ಮ ಭೂಪ್ರದೇಶದೊಳಗೆ ಲಂಗರು ಹಾಕಿದ್ದಾರೆ ಎಂದು ಆರೋಪಿಸಿದರು.
ಮುಂದಿನ ಕೆಲವೇ ತಿಂಗಳುಗಳಲ್ಲಿ ಘೋಷಣೆಯಾಗಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇರಳಕ್ಕೆ ಎರಡು ದಿನಗಳ ಭೇಟಿಯಲ್ಲಿರುವ ರಾಹುಲ್ ಗಾಂಧಿ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ನ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ, ಸಿಪಿಐಎಂ ನೇತೃತ್ವದ ಎಲ್ ಡಿಎಫ್ ವಿರುದ್ಧ ವಾಗ್ದಾಳಿ ನಡೆಸಿದರು.
ಆರ್ ಎಸ್ ಎಸ್ ದ್ವೇಷ ಹರಡುತ್ತಿದ್ದು, ದೇಶದ ಆರ್ಥಿಕತೆ ಕುಸಿಯಲು ಆರ್ ಎಸ್ ಎಸ್ ಕಾರಣ ಎಂದು ಆರೋಪಿಸಿದರು.
ದೇಶದ ವರ್ಚಸ್ಸಿಗೆ ಪ್ರಧಾನಿ ಮಾಡುತ್ತಿರುವ ಹಾನಿ ನಿಮಗೆ ತಿಳಿದಿದೆ. ಇದೇ ಮೊದಲ ಬಾರಿಗೆ ಚೀನಾದ ಸೈನ್ಯವು ಭಾರತೀಯ ಭೂಪ್ರದೇಶದೊಳಗೆ ಪ್ರವೇಶಿಸಿದೆ. ವಿಶ್ವದಲ್ಲೇ ಅತ್ಯುತ್ತಮ ಆರ್ಥಿಕತೆಯಾದ ನಮ್ಮ ದೇಶದ ಆರ್ಥಿಕತೆಯು ಇಂದು ತೀರಾ ಕೆಳಮಟ್ಟದಲ್ಲಿದೆ. ಆರ್‌ಎಸ್‌ಎಸ್ ನ ಸಿದ್ಧಾಂತದ ಪರಿಣಾಮದಿಂದಾಗಿ ನಮ್ಮ ಯುವಕರಿಗೆ ಉದ್ಯೋಗಗಳು ಸಿಗುತ್ತಿಲ್ಲ ಎಂದು ಆರೋಪಿಸಿದರು.
ಮೋದಿ ಅಸರ್ಮಥ ಪ್ರಧಾನಿ, ಅವರ ಈ ವೈಫಲ್ಯಕ್ಕೆ ಆರ್‌ಎಸ್‌ಎಸ್ ದೇಶದಲ್ಲಿ ಹರಡುತ್ತಿರುವ ದ್ವೇಷವೇ ನೈಜ ಕಾರಣ ಎಂದು ರಾಹುಲ್ ಆರೋಪಿಸಿದರು.
“ಚೀನಾದ ಸೈನ್ಯವು ದೇಶದೊಳಗೆ ಬಂದಾಗ ಮೋದಿಯ 56 ಇಂಚಿನ ಎದೆಗೆ ಏನಾಗಿತ್ತು. ಕಳೆದ ಆರು ತಿಂಗಳಲ್ಲಿ ಪ್ರಧಾನಿ ಚೀನಾ ಬಗ್ಗೆ ಒಂದು ಮಾತನ್ನೂ ಆಡಿಲ್ಲ ಎಂದು ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಟೀಕಾಪ್ರಹಾರ ನಡೆಸಿದರು.