“ಎರಡು ರಾಜ್ಯಗಳ ಮುಖ್ಯಮಂತ್ರಿಗಳು ನಿಮ್ಮ ಬೆನ್ನಿಗಿದ್ದಾರೋ ಅಥವಾ ಕಾಲ ಕೆಳಗಿದ್ದಾರೋ ಗೊತ್ತಿಲ್ಲ. ಆದರೆ ಈ ಮುಖ್ಯಮಂತ್ರಿಗಳ ಕಾರಣಕ್ಕೆ ಏನು ಬೇಕಾದರೂ ಮಾಡಬಹುದು ಅಂದುಕೊಳ್ಳಬೇಡಿ. ಕಾನೂನಿನಡಿಯಲ್ಲಿ ಕೆಲಸ ಮಾಡಿ” ಎಂದು ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹರಿಹಾಯ್ದಿರುವುದು ವರದಿಯಾಗಿದೆ.
” ಹುಣಸೂರಿನ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ನಾನು ಪ್ರಶ್ನೆ ಮಾಡಿದ್ದು ನಿಜ. ಅದನ್ನು ಅನುಪಾಲನಾ ವರದಿಯಲ್ಲಿ ಸೇರಿಸಿ ಮುಂದಿನ ಸಭೆಯಲ್ಲಿ ಉತ್ತರಿಸುವುದು ಪದ್ಧತಿ. ಆದರೆ ನಾನು ಪ್ರಶ್ನೆ ಮಾಡಿದ್ದಕ್ಕೆ ಇದೀಗ ಹಗೆತನ ಸಾಧಿಸಲು ಮುಂದಾಗಿದ್ದಾರೆ” ಎಂದು ಅವರು ಸುದ್ದಿಗೋಷ್ಠಿಯಲ್ಲಿ ಟೀಕಿಸಿದ್ದಾರೆ.
“ನನಗೆ ಮರುದಿನವೇ ಪತ್ರ ಬರೆದಿದ್ದ ಅವರು ಆ ಪತ್ರ ನನ್ನ ಕೈಸೇರುವ ಮುನ್ನವೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದಾರೆ. ನನಗೆ ಪತ್ರ ಬರೆದಿರುವುದು ಕಾನೂನುಬಾಹಿರ ಕ್ರಮ. ಸಭೆ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯುವಂತಿಲ್ಲ. ಈ ವಿಚಾರದಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಕಾನೂನು ತಜ್ಞರ ಸಲಹೆ ಪಡೆದು ಅವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದೂ ಹೇಳಿದ್ದಾರೆ