Home ಟಾಪ್ ಸುದ್ದಿಗಳು ಮುಸ್ಲಿಮರ ಜನಸಂಖ್ಯೆ ಮಾತ್ರ ಏರಿಕೆಯಾಗುತ್ತಿಲ್ಲ, ಎಲ್ಲ ಧರ್ಮದವರದ್ದೂ ಏರಿಕೆಯಾಗುತ್ತಿದೆ: ರಾಮದಾಸ್ ಅಠಾವಳೆ

ಮುಸ್ಲಿಮರ ಜನಸಂಖ್ಯೆ ಮಾತ್ರ ಏರಿಕೆಯಾಗುತ್ತಿಲ್ಲ, ಎಲ್ಲ ಧರ್ಮದವರದ್ದೂ ಏರಿಕೆಯಾಗುತ್ತಿದೆ: ರಾಮದಾಸ್ ಅಠಾವಳೆ

ಬೆಂಗಳೂರು; ದೇಶದಲ್ಲಿ ಜನ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಒದಗಿಸಲು ಜಾತಿ ಆಧಾರಿತ ಜನಗಣತಿ ನಡೆಯುವ ಅಗತ್ಯವಿದ್ದು, ಈ ಸಂಬಂಧ ಪ್ರಧಾನಮಂತ್ರಿ ಹಾಗೂ ಜನಗಣತಿ ಆಯೋಗದೊಂದಿಗೆ ಸಮಾಲೋಚಿಸುವುದಾಗಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮ್ ದಾಸ್ ಅಠಾವಳೆ ತಿಳಿಸಿದ್ದಾರೆ.


ಇದೇ ಸಂದರ್ಭದಲ್ಲಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ 2021 – 30ರ ನೂತನ ಜನ ಸಂಖ್ಯಾ ಯೋಜನೆಯನ್ನು ವಿರೋಧಿಸಿದರು. ಶೋಷಿತ ಸಮುದಾಯ, ಬುಡಕಟ್ಟು ಜನರಿಗೆ ನಾಲ್ಕೈದು ಮಕ್ಕಳಿರುತ್ತಾರೆ. ಹೀಗಿರುವಾಗ ಎರಡು ಮಕ್ಕಳಿಗಿಂತ ಹೆಚ್ಚು ಸಂತಾನ ಹೊಂದಿದ್ದರೆ ಸರ್ಕಾರಿ ನೌಕರಿ ಇಲ್ಲ ಎನ್ನುವುದು ಸರಿಯಲ್ಲ ಎಂದಿದ್ದಾರೆ.
ಜತೆಗೆ ದೇಶದಲ್ಲಿ ಮೀಸಲಾತಿ ಪ್ರಮಾಣವೂ ಸಹ ಗಣನೀಯವಾಗಿ ಹೆಚ್ಚಳವಾಗಬೇಕಾಗಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಏನೇ ಹೇಳಿದ್ದರೂ ಸಹ ಕಾನೂನು ರೂಪಿಸುವುದು ಸಂಸತ್. ಹೀಗಾಗಿ ಮೀಸಲಾತಿ ಹೆಚ್ಚಳಕ್ಕೆ ಸಂಸತ್ ನಲ್ಲಿ ತಿದ್ದುಪಡಿ ತರಬೇಕು. ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿ ಒದಗಿಸಬೇಕು ಎಂದು ಸಹ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿಯಿಂದ ಜಾತಿಗಳ ಜನಸಂಖ್ಯೆಯ ವಿವರ ದೊರೆಯಲಿದ್ದು, ಇದರಿಂದ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಸೂಕ್ತವಾಗಿ ತಲುಪಿಸಲು ಹಾಗೂ ಸರ್ಕಾರಿ ಯೋಜನೆ ಮತ್ತು ಕಾರ್ಯಕ್ರಮಗಳ ನೀತಿ ರೂಪಿಸಲು ನೆರವಾಗಲಿದೆ ಎಂದು ಬಲವಾಗಿ ಪ್ರತಿಪಾದಿಸಿದರು.
ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾತಿ ಜನಗತಿ ವರದಿ ಸಿದ್ಧಪಡಿಸಿದ್ದು, ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಹೇಳಲಾದ ಪ್ರಶ್ನೆಗೆ, ಇದು ನಮ್ಮ ಪಕ್ಷದ ನಿಲುವಾಗಿದೆ. ಇದು ಕರ್ನಾಟಕ್ಕೆ ಸೀಮಿತವಾದ ವಿಷಯವಲ್ಲ. ಇಡೀ ದೇಶಕ್ಕೆ ಸಂಬಂಧಿಸಿದ್ದು, ನಮ್ಮ ನಿಲುವನ್ನು ಕೇಂದ್ರದ ಮುಂದೆ ಬಲವಾಗಿ ಪ್ರತಿಪಾದಿಸುತ್ತೇವೆ ಎಂದರು.
ಕರ್ನಾಟಕದಲ್ಲಿ ಶೇ 17,15 ರಷ್ಟು ಪರಿಶಿಷ್ಟ ಜಾತಿ ಜನಸಂಖ್ಯೆಯಿದ್ದು, ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ 30 ರಷ್ಟು ಮತ್ತು ಉಡುಪಿ ಜಿಲ್ಲೆಯಲ್ಲಿ ಅತಿ ಕಡಿಮೆ ಶೇ 6 ರಷ್ಟು ಪರಿಶಿಷ್ಟ ಜಾತಿಯ ಜನರಿದ್ದಾರೆ ಎಂದು ರಾಮದಾಸ್ ಅಠಾವಳೆ ತಿಳಿಸಿದರು.

ಪ್ರಸ್ತುತ ಆರ್ಥಿಕ ದುರ್ಬಲರಿಗೆ ಶೇ 10 ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರ ನೀಡಿದ್ದು, ಇದೀಗ ಒಟ್ಟಾರೆ ಮೀಸಲಾತಿ ಪ್ರಮಾಣ ಶೇಕಡ 59.5 ರಷ್ಟಿದೆ. ಸದ್ಯಕ್ಕೆ ಮೀಸಲಾತಿ ಕಾನೂನಿಗೆ ತಿದ್ದುಪಡಿ ಅಗತ್ಯವಿದೆ. ಸುಪ್ರೀಂ ಕೋರ್ಟ್ ಮರಾಠ ಮೀಸಲಾತಿಯನ್ನು ವಿರೋಧಿಸಿದೆ. ಹಾಗೆಂದ ಮಾತ್ರಕ್ಕೆ ಸಂಸತ್ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜನ ಸಂಖ್ಯಾ ನೀತಿ ಕುರಿತು ಕೇಳಲಾದ ಪ್ರಶ್ನೆಗೆ ಬುಡಕಟ್ಟು ಜನ, ಶೋಷಿತ ಸಮುದಾಯದಲ್ಲಿ ಹೆಚ್ಚು ಮಕ್ಕಳಿರುತ್ತವೆ. ಅಂತಹ ವರ್ಗವನ್ನು ಸೌಲಭ್ಯದಿಂದ ವಂಚಿಸುವುದು ಸರಿಯಲ್ಲ. ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿಲ್ಲ. ಎಲ್ಲಾ ಧರ್ಮದವರ ಜನಸಂಖ್ಯೆಯಂತೆ ಮುಸ್ಲಿಮರ ಜನ ಸಂಖ್ಯೆ ಕೂಡ ವೃದ್ಧಿಸುತ್ತಿದೆ. ಹೀಗಿರುವಾಗ ಆದಿತ್ಯ ನಾಥ್ ಯಾವ ಉದ್ದೇಶದಿಂದ ಇಂತಹ ನೀತಿ ಜಾರಿಗೆ ಮುಂದಾಗಿದ್ದಾರೋ ತಿಳಿಯದು ಎಂದರು.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸ್ಥಾನ ಮೀಸಲಾತಿ ಕಲ್ಪಿಸಲಾಗಿದೆ. ಇದೇ ರೀತಿ ಶಾಸನ ಸಭೆಗಳಲ್ಲೂ ಮಹಿಳೆಯರಿಗೆ ಶೇ 33 ರಷ್ಟು ಮೀಸಲು ಸೌಲಭ್ಯ ಕಲ್ಪಿಸುವುದು ಇಂದಿನ ಅಗತ್ಯವಾಗಿದೆ. ಲೋಕಸಭೆಯಲ್ಲಿ 543 ಸ್ಥಾನಗಳಿದ್ದು, ಮಹಿಳೆಯರಿಗೆ 181 ಸ್ಥಾನಗಳನ್ನು ಕಲ್ಪಿಸಬೇಕಾಗಿದೆ. ಜತೆಗೆ ಎರಡು ಆಂಗ್ಲೋ ಇಂಡಿಯನ್ ಸ್ಥಾನಗಳ ಪೈಕಿ ಒಂದನ್ನು ದೇಶ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನದಿಂದ ಬಂದ ಸಿಂಧಿ ಸಮುದಾಯಕ್ಕೆ ಮೀಸಲಿರಿಸಲು ಸಂವಿಧಾನ ತಿದ್ದುಪಡಿ ಮಾಡಬೇಕು ಎಂದು ಹೇಳಿದರು.
ಪ್ರಧಾನಮಂತ್ರಿಯವರ ಮಹತ್ವಾಕಾಂಕ್ಷಿ ಯೋಜನೆಗಳು ರಾಜ್ಯದಲ್ಲಿ ಉತ್ತಮವಾಗಿ ಅನುಷ್ಠಾನಗೊಳ್ಳುತ್ತಿವೆ. ಪ್ರಧಾನಮಂತ್ರಿ ಮುದ್ರಾ ಯೋಜನೆ, ಪ್ರಧಾನಮಂತ್ರಿ ಆವಾಸ್ ನಗರ ಮತ್ತು ಗ್ರಾಮೀಣ ಯೋಜನೆ, ಪ್ರಧಾನಮಂತ್ರಿ ಉಜ್ವಲ ಯೋಜನೆ, ಪ್ರಧಾನಮಂತ್ರಿ ಜನ್ ಆರೋಗ್ಯ ಮತ್ತು ಉಜ್ವಲ ಯೋಜನೆಗಳ ಪ್ರಗತಿ ಸಮರ್ಪಕವಾಗಿದೆ ಎಂದರು.
ಬ್ಯಾಂಕಿಂಗ್ ಸೌಲಭ್ಯದಿಂದ ಹೊರಗುಳಿದಿರುವ ದುರ್ಬಲ ಸಮುದಾಯಗಳನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡಿಸುವ ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ದೇಶಾದ್ಯಂತ 42,58,67000 ಜನ್ ಧನ್ ಖಾತೆಗಳನ್ನು ತೆರೆಯಲಾಗಿದ್ದು, 1,44,156 ಕೋಟಿ ರೂಪಾಯಿ ಠೇವಣಿ ಸಂಗ್ರಹವಾಗಿದೆ. ಕರ್ನಾಟಕದಲ್ಲಿ 1,52,72000 ಖಾತೆಗಳನ್ನು ತೆರೆಲಾಗಿದ್ದು, 5,279 ಕೋಟಿ ಹಣ ಈ ಖಾತೆಗಳಲ್ಲಿವೆ ಎಂದು ಹೇಳಿದರು.
ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಉದ್ದಿಮೆ, ವ್ಯಾಪಾರ, ವಹಿವಾಟು ನಡೆಸಲು 50 ಸಾವಿರ ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಒದಗಿಸುತ್ತಿದ್ದು, 30,18,43000 ಕೋಟಿ ರೂಪಾಯಿ ಸಾಲ ನೀಡಲಾಗಿದೆ. ವಿಶೇಷವಾಗಿ ಕರ್ನಾಟಕಕ್ಕೆ 2,96,96000 ಕೋಟಿ ರೂಪಾಯಿ ಸಾಲ ವಿತರಿಸಲಾಗಿದೆ ಎಂದು ಸಚಿವ ಶ್ರೀ ರಾಮದಾಸ್ ಅಥಾವಳೆ ಮಾಹಿತಿ ನೀಡಿದರು.

ಸೂರಿಲ್ಲದವರಿಗೆ ಸೂರು ಕಲ್ಪಿಸುವ ಪ್ರಧಾನಮಂತ್ರಿ ಆವಾಸ್ ನಗರ ಯೋಜನೆಯಡಿ 50,08000 ಮನೆಗಳನ್ನು ನಿರ್ಮಿಸಿದ್ದು, ಕರ್ನಾಟಕದಲ್ಲಿ 2,46,000 ಮನೆಗಳನ್ನು 11205 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದೇ ರೀತಿ ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ 1,91,37,000 ಮನೆಗಳನ್ನು ನಿರ್ಮಿಸಿದ್ದು, 1,36,951 ಕೋಟಿ ರೂಪಾಯಿ ವೆಚ್ಚದಲ್ಲಿ 1,89,000 ಮನೆಗಳನ್ನು ನಿರ್ಮಿಸಲಾಗಿದೆ ಎಂದರು.

ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 2016 ರಿಂದ 2021 ರ ಜುಲೈವರೆಗೆ 8.16 ಕೋಟಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಿದ್ದು, ಕರ್ನಾಟಕದಲ್ಲಿ 38,54,000 ಸಂಪರ್ಕಗಳನ್ನು ಒದಗಿಸಲಾಗಿದೆ. ಉಜಲಾ ಯೋಜನೆಯಡಿ 2015 ರಿಂದ 2021 ರ ಜುಲೈವರೆಗೆ 35,20,00000 ಎಲ್.ಇ.ಡಿ ಬಲ್ಬ್ ಗಳನ್ನು ಒದಗಿಸಿದ್ದು, ಇದಕ್ಕಾಗಿ ಒಟ್ಟಾರೆ 2,464 ಕೋಟಿ ರೂಪಾಯಿ ಒದಗಿಸಲಾಗಿದೆ. ಕರ್ನಾಟಕದಲ್ಲಿ 2,39,00000 ಫಲಾನುಭವಿಗಳಿಗೆ 168 ಕೋಟಿ ರೂಪಾಯಿ ವೆಚ್ಚದಲ್ಲಿ ಬಲ್ಪ್ ಗಳನ್ನು ವಿತರಿಸಲಾಗಿದೆ ಎಂದು ಸಚಿವ ಶ್ರೀ ರಾಮದಾಸ್ ಅಥಾವಳೆ ಹೇಳಿದರು.

ಜನರ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸುತ್ತಿರುವ ಪ್ರಧಾನಮಂತ್ರಿ ಜನ್ ಆರೋಗ್ಯ [ಆಯುಷ್ಮಾನ್ ಭಾರತ್] ಯೋಜನೆಯಡಿ 16,01 ಕೋಟಿ ಫಲಾನುಭವಿಗಳಿಗೆ ದೇಶಾದ್ಯಂತ 23,841 ಕೋಟಿ ರೂಪಾಯಿ ವೆಚ್ಚ ಮಾಡಿದ್ದು, ಕರ್ನಾಟಕದಲ್ಲಿ 92,82,000 ಫಲಾನುಭವಿಗಳಿಗೆ 1 ಸಾವಿರದ 736 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.

Join Whatsapp
Exit mobile version