ಮುಂಬೈ : ಓರ್ವ ಪ್ರಕಾಶಕ, ಸಂಪಾದಕ, ಪತ್ರಕರ್ತನಾಗಿ ತಮ್ಮ 30 ವರ್ಷಗಳ ಅನುಭವದಲ್ಲಿ ತಾವು ಯಾವತ್ತೂ ಸರ್ಕಾರದಿಂದ ಇಂತಹ ಬೆದರಿಕೆ, ಅವಮಾನ ಎದುರಿಸಿರಲಿಲ್ಲ ಎಂದು ಗಮ್ಮತ್ ಭಂಡಾರಿ ಹೇಳುತ್ತಾರೆ. ಬೀಡ್ ಜಿಲ್ಲಾ ಮೂಲದ ಜನಪ್ರಿಯ ಮರಾಠಿ ಪತ್ರಿಕೆ ಪಾರ್ಶ್ವಭೂಮಿಯ ಸಂಪಾದಕರಾಗಿ ಭಂಡಾರಿ, ದಶಕಗಳಿಂದ ಆಡಳಿತದ ವಿರುದ್ಧ ಹಲವಾರು ಟೀಕಾತ್ಮಕ ಬರಹಗಳನ್ನು ಬರೆದಿದ್ದರು. ಆದರೆ, ತಮ್ಮ ಕೆಲಸಕ್ಕಾಗಿ ಅವರು ಎಂದಿಗೂ ಒಂದೇ ಒಂದು ಕ್ರಿಮಿನಲ್ ಆಪಾದನೆ ಎದುರಿಸಿರಲಿಲ್ಲ ಅಥವಾ ಜೈಲಿಗೆ ಹೋಗಿರಲಿಲ್ಲ. ಆದರೆ, ಈಗ ಜು. 22ರಂದು 12-15 ಪೊಲೀಸರ ತಂಡ ಅವರ ಪತ್ರಿಕೆಯ ಕಚೇರಿಗೆ ಬಂದು, ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿತು.
ಕಳೆದ ಮಾರ್ಚ್ ನಲ್ಲಿ ಕೋವಿಡ್ 19 ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಲಾಕ್ ಡೌನ್ ಘೋಷಿಸಿದ ನಂತರ ಸುಳ್ಳು ಸುದ್ದಿ, ತಪ್ಪು ವರದಿಗಳನ್ನು ತಡೆಯಲು ಮಹಾರಾಷ್ಟ್ರ ಪೊಲೀಸರು ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈ ವೇಳೆ ಕೆಲವು ಖ್ಯಾತ ಪತ್ರಕರ್ತರ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ. ಕೆಲವು ಪ್ರಕರಣಗಳಲ್ಲಿ ಅನಾವಶ್ಯಕವಾಗಿ ಪತ್ರಕರ್ತರನ್ನು ಗುರಿಪಡಿಸಲಾಗಿದೆ ಎಂಬ ಆಪಾದನೆಗಳೂ ಕೇಳಿಬಂದಿವೆ. ದೇಶದಲ್ಲೇ ಅತಿಹೆಚ್ಚು ಕೋವಿಡ್ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿದ್ದುದರಿಂದ, ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಿಸುವ ನಡುವೆ, ಕೆಲವು ಸುಳ್ಳು ಸುದ್ದಿಕೋರರನ್ನು ನಿಯಂತ್ರಿಸುವುದೂ ಪೊಲೀಸರಿಗೆ ಅನಿವಾರ್ಯವಾಗಿತ್ತು. ಆದರೆ, ಕೆಲವು ಪ್ರತಿಷ್ಠಿತ ಪತ್ರಕರ್ತರನ್ನೂ ಗುರಿಯಾಗಿರಿಸಿರುವುದು ಮಾಧ್ಯಮ ವಲಯದಲ್ಲಿ ಸರ್ಕಾರದ ವಿರುದ್ಧ ಆಕ್ರೋಶದ ವಾತಾವರಣ ಸೃಷ್ಟಿಸಿದೆ.
ಪೊಲೀಸ್ ಸಿಬ್ಬಂದಿಯೊಬ್ಬರು ಥಾಣೆಯಿಂದ 400 ಕಿ.ಮೀ. ದೂರದ ಬೀಡ್ ನ ತಮ್ಮ ಗ್ರಾಮಕ್ಕೆ ಮೋಟಾರ್ ಬೈಕ್ ನಲ್ಲಿ ಜಿಲ್ಲಾಡಳಿತದ ಅನುಮತಿಯಿಲ್ಲದೆ ಆಗಮಿಸಿದುದಲ್ಲದೆ, ಕ್ವಾರಂಟೈನ್ ಅವಧಿ ಪೂರೈಸದೆ ತಮ್ಮ ಕುಟುಂಬದವರೊಂದಿಗೆ ಉಳಿದಿದ್ದ ಬಗ್ಗೆ ಗಮ್ಮತ್ ಭಂಡಾರಿ ಅವರ ಪತ್ರಿಕೆಯಲ್ಲಿ ವರದಿಯಾಗಿತ್ತು. ಇದಕ್ಕಾಗಿ ಅವರ ವಿರುದ್ಧ ಐಪಿಸಿ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.
ಗ್ರಾಮಸ್ಥರ ಬಳಿಯಿಂದ ಎಲ್ಲ ಮಾಹಿತಿ ಪಡೆದೇ ಈ ವರದಿ ಮಾಡಲಾಗಿತ್ತು. ಆದರೆ, ವರದಿ ಪೊಲೀಸ್ ಸಿಬ್ಬಂದಿಯ ವಿರುದ್ಧವಾಗಿದ್ದುದರಿಂದ, ಜಾಮೀನುರಹಿತ ಪ್ರಕರಣ ದಾಖಲಿಸಿ ತಮ್ಮನ್ನು ಜೈಲಿಗೆ ಕಳುಹಿಸಲಾಯಿತು ಎಂದು ಭಂಡಾರಿ ಹೇಳುತ್ತಾರೆ.
ಇನ್ನೊಂದು ಅಕ್ರಮ ಮರಳುಗಾರಿಕೆಯ ಸುದ್ದಿಗಾಗಿ 17 ಮಂದಿ ಪೊಲೀಸರು ತಲಾ 25 ಲಕ್ಷ ರು. ಮಾನನಷ್ಟ ದಾವೆ ನೋಟಿಸ್ ಕಳುಹಿಸಿದ್ದಾರೆ. ಈ ಅಕ್ರಮ ಮರಳು ದಂಧೆಯಲ್ಲಿ ರಾಜಕಾರಣಿಗಳು ಮತ್ತು ಪೊಲೀಸರ ಕೈವಾಡವಿರುವ ಬಗ್ಗೆ ವರದಿಯಾಗಿತ್ತು. ಇದೀಗ ಭಂಡಾರಿಯವರು ಈ ನೋಟಿಸ್ ಗಳಿಗೆ ಪ್ರತಿಕ್ರಿಯಿಸುವ ಪ್ರಕ್ರಿಯೆಯಲ್ಲಿದ್ದಾರೆ.
ಇಷ್ಟೆಲ್ಲಾ, ಭಂಡಾರಿ ತಮ್ಮ ವೃತ್ತಿ ಜೀವನದಲ್ಲಿ ಏನು ಅನುಭವಿಸುತ್ತಿದ್ದಾರೋ, ಅದು ಈಗ ಮಹಾರಾಷ್ಟ್ರದಲ್ಲಿ ಹಲವು ಪತ್ರಕರ್ತರು ಎದುರಿಸುತ್ತಿರುವ ಸ್ಥಿತಿಯಾಗಿದೆ ಎನ್ನಲಾಗಿದೆ. ಅದರಲ್ಲೂ, ಮುಖ್ಯವಾಗಿ ಮಹಾರಾಷ್ಟ್ರದಾದ್ಯಂತದ ಜಿಲ್ಲಾ ಮಟ್ಟದ ಪತ್ರಿಕೆಗಳ ಪತ್ರಕರ್ತರು ಇಂತಹ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಕಳೆದ ಮಾರ್ಚ್ ನಿಂದ ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಆರಂಭವಾದ ಬಳಿಕ ವಿವಿಧ ಮುದ್ರಣ ಮಾಧ್ಯಮ, ಟಿವಿ ಚಾನೆಲ್ ಗಳು, ಆನ್ ಲೈನ್ ಪೋರ್ಟಲ್ ಗಳ ಸುಮಾರು 15 ಇಂತಹ ಉದಾಹರಣೆಗಳು ದಾಖಲಾಗಿವೆ. ಇವರುಗಳ ವಿರುದ್ಧ ಕ್ರಿಮಿನಲ್ ಕೇಸ್ ಗಳು ದಾಖಲಾಗಿವೆ. ಇನ್ನೂ 25ಕ್ಕಿಂತಲೂ ಹೆಚ್ಚು ಪತ್ರಕರ್ತರಿಗೆ ನೋಟಿಸ್ ನೀಡಲಾಗಿದೆ ಮತ್ತು ವಿವರಣೆ ಕೋರಲಾಗಿದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಮಾನನಷ್ಟ ದಾವೆಗಳನ್ನು ಹೂಡಲಾಗಿದೆ ಮತ್ತು ಲಕ್ಷಾಂತರ ರು. ಪರಿಹಾರ ಕೋರಲಾಗಿದೆ. ಕೆಲವು ಒಬ್ಬರೇ ಪತ್ರಕರ್ತ ಅಥವಾ ಸಂಪಾದಕರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ರೀತಿ ಪ್ರಕರಣ ದಾಖಲಿಸಲ್ಪಟ್ಟ ಎಲ್ಲ ವರದಿಗಳು ಕೋವಿಡ್ 19 ನಿರ್ವಹಣೆಗೆ ಸಂಬಂಧಿಸಿದ್ದು.
ಕಳೆದ ಮಾರ್ಚ್ ನಿಂದ ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದುದಕ್ಕಾಗಿ ಸುಮಾರು 1.3 ಲಕ್ಷ ಪ್ರಕರಣಗಳು ದಾಖಲಾಗಿವೆ. ಅವರಲ್ಲಿ 28,000 ಮಂದಿಯನ್ನು ಬಂಧಿಸಲಾಗಿದೆ. ದೇಶದಲ್ಲೇ ಅತಿಹೆಚ್ಚು ಕೋವಿಡ್ ಪ್ರಕರಣ ಮಹಾರಾಷ್ಟ್ರದಲ್ಲಿ ದಾಖಲಾಗಿದ್ದು, ಆ.6ರ ವೇಳೆಗೆ 4.68 ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಮರಾಠಿ ಸುದ್ದಿ ಚಾನೆಲ್ ಎಬಿಪಿ ಮಾಜಾದ ಪತ್ರಕರ್ತ ರಾಹುಲ್ ಕುಲಕರ್ಣಿ ಮತ್ತು ಅವರ ಇಬ್ಬರು ಸಹೋದ್ಯೋಗಿಗಳಾದ ವಿಕಾಸ್ ದಲ್ವಿ, ರಾಹುಲ್ ತಾಪಸಿ, ಮರಾಠಿ ಸುದ್ದಿ ಚಾನೆಲ್ ಸಾಮ್ ಟಿವಿಯ ಸಂದೀಪ್ ನಗಾರೆ, ಪತ್ರಕರ್ತರಾದ ರೋಶಿನಿ ಶಿಂಪಿ, ಶೇಖರ್ ಮಗರ್, ರಘುನಾಥ ಬನ್ಸೋಡೆ, ಕೋವಿಡ್ ಲಾಕೌಡೌನ್ ಸಂದರ್ಭ ಸರ್ಕಾರದಿಂದ ಪ್ರಕರಣಗಳನ್ನು ಎದುರಿಸಿದ ಪ್ರಮುಖ ಪತ್ರಕರ್ತರು. ಪೊಲೀಸರು ಹಲವಾರು ಯೂಟ್ಯೂಬ್ ಚಾನೆಲ್ ಗಳು ಮತ್ತು ಸಾಮಾಜಿಕ ಜಾಲತಾಣ ಮಾಧ್ಯಮ ಪೇಜ್ ಮಾಲಕರುಗಳನ್ನೂ ಸುಳ್ಳು ಸುದ್ದಿ ಹರಡಿದುದಕ್ಕಾಗಿ ಪ್ರಕರಣಗಳಿಗೆ ಗುರಿಮಾಡಿದ್ದಾರೆ. ಸುಳ್ಳು ಸುದ್ದಿಗಳನ್ನು ಹರಡುವ ಅಥವಾ ತಪ್ಪು ವರದಿಗಳನ್ನು ಮಾಡುತ್ತಿದ್ದವರ ವಿರುದ್ಧವೂ ಕಠಿಣ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದರು.