ಮಫ್ತಿಯಲ್ಲಿದ್ದ ಇಸ್ರೇಲ್ ಯೋಧರಿಂದ 12 ವರ್ಷದ ಫೆಲೆಸ್ತಿನಿಯನ್ ಬಾಲಕನ ಅಪಹರಣ

Prasthutha|

ಜೆರುಸಲೇಂ : ಮಫ್ತಿಯಲ್ಲಿದ್ದ ಇಸ್ರೇಲ್ ಯೋಧರು 12 ವರ್ಷದ ಫೆಲೆಸ್ತಿನಿಯನ್ ಬಾಲಕನನ್ನು ಅಪಹರಣಗೈದಿರುವ ಘಟನೆಯೊಂದು ನಡೆದಿದೆ. ಜೆರುಸಲೇಂನ ಇಸ್ಸವಿಯಾದಲ್ಲಿ ಈ ಘಟನೆ ನಡೆದಿದೆ. ಮಫ್ತಿಯಲ್ಲಿದ್ದ ಇಸ್ರೇಲಿ ಸೈನಿಕರು ಅಪಹರಿಸಿದ ಕಾರೊಂದರಲ್ಲಿ ಬಾಲಕನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

- Advertisement -

ಫೆಲೆಸ್ತಿನಿಯನ್ನರ ಅಪಹರಣ ಸೇರಿದಂತೆ ಹಲವು ಕಾನೂನು ಉಲ್ಲಂಘನೆ ಚಟುವಟಿಕೆಗಳಿಗೆ ನಗರವು ಇತ್ತೀಚೆಗೆ ಸಾಕ್ಷಿಯಾಗುತ್ತಿದೆ. ಸ್ಥಳೀಯರ ಮೇಲೆ ಭಾರೀ ದಂಡ ಮತ್ತು ಶುಲ್ಕಗಳನ್ನು ವಿಧಿಸುತ್ತಿರುವುದು, ಮನೆಗಳ ಮೇಲೆ ಹಿಂಸಾತ್ಮಕ ದಾಳಿ, ಹುಡುಕಾಟದ ಕೃತ್ಯಗಳೂ ನಡೆಯುತ್ತಿವೆ. ನಿರಂತರ ದಾಳಿ ಮತ್ತು ಅಪಹರಣಗಳ ಮೂಲಕ ಫೆಲೆಸ್ತಿನ್ ನಿವಾಸಿಗಳಲ್ಲಿ ಭಯವನ್ನು ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ. ಅದಕ್ಕಾಗಿ ಹಲವಾರು ಅಂತಾರಾಷ್ಟ್ರೀಯ ಮತ್ತು ಮಾನವ ಹಕ್ಕು ಕಾನೂನುಗಳನ್ನು ವ್ಯಾಪಕವಾಗಿ ಉಲ್ಲಂಘಿಸಲಾಗುತ್ತಿದೆ ಎಂದು ಸಾಕಷ್ಟು ಮಾನವ ಹಕ್ಕು ಹೋರಾಟಗಾರರು ಆಪಾದಿಸಿದ್ದಾರೆ.  

ಇನ್ನೊಂದೆಡೆ ಇಸ್ರೇಲಿ ಪಡೆಗಳು ತೂಬಾಸ್ ನ ವೆಸ್ಟ್ ಬ್ಯಾಂಕ್ ನಗರದಲ್ಲಿ ಮೂವರು ವ್ಯಕ್ತಿಗಳ ಮನೆಗಳ ಮೇಲೆ ದಾಳಿ ನಡೆಸಿದ ಬಳಿಕ, ಅವರನ್ನು ಸುತ್ತುವರೆದ ಘಟನೆಯೂ ನಡೆದಿದೆ. ಇದು ಸ್ಥಳೀಯ ನಿವಾಸಿಗಳೊಂದಿಗೆ ಘರ್ಷಣೆಗೆ ಕಾರಣವಾಗಿದೆ. ಕೊರೊನಾ ವೈರಸ್ ಸಂಕಷ್ಟದ ನಡುವೆಯೂ ಜೆರುಸಲೇಂನಲ್ಲಿರುವ ಫೆಲೆಸ್ತಿನಿಯನ್ನರ ಮೇಲೆ ಇಸ್ರೇಲಿಗರ ದಾಳಿಗಳು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿವೆ.

Join Whatsapp